ಬೆಳಗಾವಿ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಸೋಮವಾರ ಸಂಸದ ಜಗದೀಶ ಶೆಟ್ಟರ ಹುಬ್ಬಳ್ಳಿ ನೈಋತ್ಯ ರೈಲ್ವೆ ಮಹಾ ಪ್ರಬಂಧಕ ಕೆ.ಅನಂತ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 
ಬೆಳಗಾವಿ

ರೈಲು ಮಾರ್ಗ ವಿಳಂಬಕ್ಕೆ ಸರ್ಕಾರ ಕಾರಣ

ಬೆಳಗಾವಿ: ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದಿಂದ ಈವರೆಗೂ ರೈತರಿಗೆ ಪರಿಹಾರಧನ ವಿತರಿಸಿ, ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸುವ ಕಾರ್ಯ ನಡೆದಿಲ್ಲ. ಇದರಿಂದ ಯೋಜನೆ ಅನುಷ್ಠಾನದಲ್ಲಿ ವಿಳಂಬ ಉಂಟಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕ ಕೆ.ಅನಂತ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ರೈಲ್ವೆ ಸಂಬಂಧಿತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಈ ಯೋಜನೆಯ ಅಗತ್ಯದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದು ಶೀಘ್ರ ರೈಲ್ವೆ ಇಲಾಖೆಗೆ ಪ್ರಸ್ತಾವಿತ ಭೂಮಿ ಹಸ್ತಾಂತರ ಮಾಡಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ-ಪರಕನಟ್ಟಿ-ಗೋಕಾಕ-ಯಾದವಾಡ 65 ಕಿ.ಮೀ. ರೈಲು ಮಾರ್ಗ ಅತ್ಯಂತ ಅವಶ್ಯವಾಗಿದ್ದು, ಸಿಮೆಂಟ್ ಉದ್ಯಮ, ಸಕ್ಕರೆ ಕಾರ್ಖಾನೆಗಳಿವೆ. ಸಾರ್ವಜನಿಕರ ಹಾಗೂ ಉದ್ದಿಮೆದಾರರ ಬೇಡಿಕೆಯಂತೆ ಪುನಃ ಮನವಿಯನ್ನು ರೈಲ್ವೆ ಮಂಡಳಿ ಅಧಿಕಾರಿಗಳಿಗೆ ರವಾನಿಸಬೇಕು. ಲೋಕಾಪುರ- ರಾಮದುರ್ಗ-ಸವದತ್ತಿ-ಧಾರವಾಡ ಮಾರ್ಗದ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಗಲುವ 70 ಲಕ್ಷ ರೂ.ಗೆ ಒಪ್ಪಿಗೆ ಪಡೆಯಬೇಕು. ಬೆಳಗಾವಿ ಮತ್ತು ಘಟಪ್ರಭಾ ನಿಲ್ದಾಣದಲ್ಲಿ ನಡೆಯುತ್ತಿರುವ ಪಿಎಂ ಅಮೃತ್ ಭಾರತ ಸ್ಟೇಷನ್ ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, ತೀವ್ರಗತಿಯಲ್ಲಿ ಮುಂದುವರಿಸಬೇಕು ಎಂದು ಸೂಚಿಸಿದರು.
ಬೆಳಗಾವಿ ನಿಲ್ದಾಣಕ್ಕೆ ಪರ್ಯಾಯವಾಗಿ ಸಾಂಬ್ರಾ ಹಾಗೂ ದೇಸೂರ ನಿಲ್ದಾಣಗಳ ಅಭಿವೃದ್ಧಿ, ಬೆಳಗಾವಿ-ಮಣಗೂರ ನಡುವೆ ಪುನಃ ರೈಲ್ವೆ ಸಂಚಾರ ಆರಂಭ, ಬೆಂಗಳೂರು-ಮುಂಬೈ ನೂತನ ರೈಲು ಸಂಚಾರ, ಬೆಳಗಾವಿ, ಲೋಂಡಾ-ಗೋವಾ ಮಧ್ಯೆ ನೂತನ ರೈಲು ಸಂಚಾರ ಆರಂಭದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.