ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಚಂದ್ರಹಾಸ ಅಣವೇಕರ ಮಾತನಾಡಿದರು. ಇಂದ್ರನೀಲ ಅಣವೇಕರ, ಸುಧಾಕರ ದೇಸಾಯಿ, ವಿ.ಎನ್.ಜೋಶಿ, ನವೀನಾ ಶೆಟ್ಟಿಗಾರ ಇದ್ದಾರೆ.
ಬೆಳಗಾವಿ: ನಗರದ ಜ್ಞಾನದೀಪ ಎಜುಕೇಷನ್ ಟ್ರಸ್ಟ್ 50 ವರ್ಷ ಪೂರೈಸಿದ ಪ್ರಯುಕ್ತ ಡಿ.26ಮತ್ತು 27ರಂದು ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಚಂದ್ರಹಾಸ ಅಣವೇಕರ ತಿಳಿಸಿದರು.
ಸಂಸ್ಥೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.26ರಂದು ಬೆಳಗ್ಗೆ 10 ಗಂಟೆಗೆ ನಗರದ ಮಂಡೊಳ್ಳಿ ರಸ್ತೆ ಸಾಯಿರಾಜ ಲಾನ್ಸ್‌ನಲ್ಲಿ ಆಯೋಜಿಸಿರುವ ಸುವರ್ಣ ಮಹೋತ್ಸವನ್ನು ರಾಜ್ಯಸಭಾ ಸದಸ್ಯ, ಪದ್ಮಶ್ರೀ ಉಜ್ವಲ್ ನಿಕ್ಕಂ ಉದ್ಘಾಟಿಸುವರು. ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ವಿಶೇಷ ಭಾಷಣ ಮಾಡುವರು. ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್ ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ‘ಗೋಲ್ಡನ್ ರಿದಮ್ಸ್’ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಡಿಡಿಪಿಐ ಲೀಲಾವತಿ ಹಿರೇಮಠ ಪಾಲ್ಗೊಳ್ಳುವರು. ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಡಿ.27ರಂದು ಟಿಳಕವಾಡಿಯಲ್ಲಿನ ಜಿ.ಜಿ.ಚಿಟ್ನಿಸ್ ಶಾಲೆ ಪ್ರಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಆಯೋಜಿಸಲಾಗಿದ್ದು, ಸಂವಾದ ಮತ್ತು ಸ್ನೇಹ ಸಮ್ಮಿಲನ ನಡೆಯಲಿದೆ ಎಂದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷೆ ಡಾ.ನವೀನಾ ಶೆಟ್ಟಿಗಾರ, ಸಂಸ್ಥೆಯ ಅಧ್ಯಕ್ಷ ವಿ.ಎನ್.ಜೋಶಿ, ಉಪಾಧ್ಯಕ್ಷರಾದ ಸುಧಾಕರ ದೇಸಾಯಿ, ಇಂದ್ರನೀಲ ಅಣವೇಕರ ಇದ್ದರು.