ಬೆಳಗಾವಿಯಲ್ಲಿ ನಡೆಯುತ್ತಿರುವ ಧರ್ಮಚಕ್ರ ಆರಾಧನಾ ಮಹೋತ್ಸವದಲ್ಲಿ ಭಾನುವಾರ ಕೆಎಲ್​ಇ ಸಂಸ್ಥೆ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಸುನೀಲ ಹನಮಣ್ಣವರ, ಭೂಷಣ ಮಿರ್ಜಿ, ಡಾ.ರಮೇಶ ದೊಡ್ಡಣ್ಣವರ, ಅನಿಲ ಬೆನಕೆ ಇದ್ದಾರೆ. 
ಬೆಳಗಾವಿ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ:ಡಾ.ಪ್ರಭಾಕರ ಕೋರೆ ಸಲಹೆ

ಬೆಳಗಾವಿ: ಧಾರ್ಮಿಕ ಕಾರ್ಯಕ್ರಮ ಮೂಲಕ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಆಹಾರ ಪದ್ಧತಿ ಹಾಗೂ ಉತ್ತಮ ನಡವಳಿಕೆ ಕಲಿಸಿಕೊಡಬೇಕು ಎಂದು ಕೆಎಲ್​ಇ ಸಂಸ್ಥೆಯ ಗೌರವ ಕಾರ್ಯಾಧ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೋಟೆ ಆವರಣದ ಕಮಲ ಬಸದಿಯಲ್ಲಿ ನಡೆಯುತ್ತಿರುವ ಧರ್ಮಚಕ್ರ ಆರಾಧನಾ ಮಹೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಜೈನ ಧರ್ಮದ ಇತಿಹಾಸ ಅಪಾರವಾಗಿದೆ. ಈ ಹಿಂದೆಯೂ ಕಮಲ ಬಸದಿ ಜೀಣೋರ್ದ್ಧಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಸಲ ಇನ್ನಷ್ಟು ಸುಶೋಭಿಕರಣ ಮೂಲಕ ಈ ಬಸದಿಯ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರುಗು ತರಲಾಗಿದೆ ಎಂದು ಶ್ಲಾಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರವಿದೆ. ಇಂದು ಕನ್ನಡ ಭಾಷೆ ಜೀವಂತವಾಗರಲು ಜೈನ ಸಮುದಾಯದ ಕೊಡುಗೆಯೂ ಹೆಚ್ಚಿದೆ. ನಾನೂ ಜೈನ ಸಮುದಾಯದ ನಡುವೆ ಬೆಳೆದಿದ್ದೇನೆ. ಹೀಗಾಗಿ, ಅಹಿಂಸಾ ತತ್ತ$್ವ ಸಹಿತ ಜೈನರ ಅನೇಕ ಸಂಸ್ಕಾರ ಅಳವಡಿಸಿಕೊಂಡಿದ್ದೇನೆ ಎಂದರು.
ಇದೆ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ, ಮಾಜಿ ಶಾಸಕ ಅನಿಲ ಬೆನಕೆ, ಶಾಸಕ ಅಭಯ ಪಾಟೀಲ, ಹಿರಿಯ ವಕೀಲ ಸದಾಶಿವ ಶಾಂತನಗೌಡ ಮತ್ತು ರವಿರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸುನೀಲ ಹನಮಣ್ಣವರ, ಭರತ ಪಾಟೀಲ, ಡಾ.ರಮೇಶ ದೊಡ್ಡಣ್ಣವರ, ಭೂಷಣ ಮಿರ್ಜಿ, ಸನ್ಮತಿ ಕಸ್ತೂರಿ, ಅಭಿನಂದನ ಜಾಬನ್ನವರ, ಹೀರಾಚಂದ ಕಲಮನಿ ಇತರರಿದ್ದರು.
ವಿನೋದ ದೊಡ್ಡಣ್ಣವರ ಸ್ವಾಗತಿಸಿದರು. ಪದ್ಮರಾಜ ವೈಜನ್ನವರ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ 150 ಮಕ್ಕಳಿಗೆ ಮೌಂಜಿ ಬಂಧನ ಉಪನಯನದ ಕಾರ್ಯಕ್ರಮ ನಡೆಯಿತು. ಆಚಾರ್ಯ ಧರ್ಮಸೇನ ಮುನಿಗಳು ಮೌಂಜಿ ಬಂಧನ ಮಕ್ಕಳಿಗೆ ವೃತಧಾರಣೆ ಮತ್ತು ನಿಯಮ ನೀಡಿದರು. ಪಂಡಿತರಾದ ಅಮೋಲ ಉಪಾಧ್ಯೆ, ಮಹಾವೀರ ಉಪಾಧ್ಯೆ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು.