ಕಸ ಎಸೆಯದಂತೆ ಜಾಗ ಸುಂದರಗೊಳಿಸಿರುವುದು.
ನಗರವನ್ನು ಸ್ವಚ್ಛವಾಗಿಡಲು ಮಹಾನಗರ ಪಾಲಿಕೆ ಪೌರಕಾರ್ಮಿಕರು ನಾನಾ ಕಸರತ್ತು ಮಾಡುತ್ತಿದ್ದಾರೆ. ಬೀದಿ ಬದಿಯಲ್ಲಿ ಕಸ ಎಸೆಯುವುದನ್ನು ತಡೆಯಲು ಕ್ರಿಯಾತ್ಮಕ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇದ್ಯಾವುದನ್ನೂ ಪರಿಗಣಿಸದ ಕೆಲವರು ಕಸ ಎಸೆಯುವ ದುರ್ಬುದಿ ಮಾತ್ರ ಬಿಡುತ್ತಿಲ್ಲ. ಬ್ಲಾೃಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸಿದ ಬೆನ್ನಲ್ಲೇ ಕಸ ಎಸೆಯುವ ಹೊಸ ಸ್ಪಾಟ್‌ಗಳನ್ನು ಹುಟ್ಟುಹಾಕುತ್ತಿರುವುದು ದುರಂತ.
ಮನೆ ಮನೆ ಕಸ ಸಂಗ್ರಹಣೆಗೆ ಸರಿಯಾಗಿ ಬರುವುದಿಲ್ಲವೆಂಬ ಕಾರಣಕ್ಕೆ ರಸ್ತೆ ಬದಿ ಕಸ ಎಸೆಯುತ್ತಾರೆಂಬ ಮಾತು ಇತ್ತು. ಹೀಗಾಗಿ, ನಿತ್ಯವೂ ನಿಯಮಿತ ಕಸ ಸಂಗ್ರಹಣೆಗೆ ಮಹಾನಗರ ಪಾಲಿಕೆ ಆದ್ಯತೆ ನೀಡಿ, ಕಸ ಎಸೆಯುವ ಬೀದಿ ಬದಿಯ ಪ್ರದೇಶಗಳನ್ನು ಸ್ವಚ್ಛಗೊಳಿಸಿದ್ದರು. ಅಲ್ಲಿ ರಂಗೋಲಿ ಬಿಡಿಸುವುದು, ಬಣ್ಣದ ಪರಪರಿ ಕಟ್ಟುವುದು, ಹೂ ಚೆಲ್ಲಿ ದೇವರ ಸ್ಥಾನದಂತೆ ಬಿಂಬಿಸುವ ಹಲವು ಪ್ರಯತ್ನ ನಡೆದವು. ಆದರೂ ಜನರ ಮನಸ್ಥಿತಿ ಮಾತ್ರ ಸುಧಾರಿಸಿಲ್ಲ. ಈಗ ಬ್ಲಾೃಕ್ ಸ್ಪಾಟ್‌ಗಳಲ್ಲೇ ಸಣ್ಣ ಉದ್ಯಾನ ನಿರ್ಮಿಸಿ, ಸ್ವಚ್ಛತೆಯ ಜಾಗೃತಿ ಇರುವ ಆಕೃತಿಗಳನ್ನು ಪ್ರತಿಷ್ಠಾಪಿಸಿ, ದೀಪಾಲಂಕರ ಮಾಡಿದ್ದಾರೆ. ನೋಡುವುದಕ್ಕೆ ಇದು ಆಕರ್ಷಕವಾಗಿದ್ದರೂ ಕೆಟ್ಟ ಮನಸ್ಥಿತಿಯ ದುರುಳರು ಮಾತ್ರ, ಇದರ ಪಕ್ಕದಲ್ಲೇ ಕಸ ಎಸೆದು ಹೋಗುತ್ತಿದ್ದಾರೆ.
ಈಚೆಗೆ ಅತೀ ಹೆಚ್ಚು ಕಸ ಬೀಸಾಡುತ್ತಿದ್ದ ರೈಲ್ವೆ ನಿಲ್ದಾಣ ರಸ್ತೆಯ ಅಂಬಾಭವಾನಿ ವೃತ್ತದ ಬ್ಲಾೃಕ್ ಸ್ಪಾಟ್‌ನಲ್ಲಿ ಅಂದವಾದ ಆಕೃತಿಗಳುಳ್ಳ ಮಿನಿ ಉದ್ಯಾನ ನಿರ್ಮಿಸಲಾಗಿದೆ. ಇದು ಜನರಿಗೆ ಆಕರ್ಷಣೀಯವಾಗಿ ಕಾಣುತ್ತಿದೆ. ದುರಂತವೆಂದರೆ ಇನ್ನೊಂದು ಬದಿಗೆ (ರೇಡಿಯೋ ಕಾಂಪ್ಲೆಕ್ಸ್ ರಸ್ತೆ) ನಾಲೆಯಿದ್ದು, ಇಲ್ಲಿ ಕಸ ಎಸೆಯದಂತೆ ಹಸಿರು ಪರದೆ ಕಟ್ಟಲಾಗಿದೆ. ಇದನ್ನು ಹರಿದು ಆ ರಂಧ್ರದ ಮೂಲಕ ಕಸ ಎಸೆಯುತ್ತಿದ್ದು, ಬ್ಲಾೃಕ್ ಸ್ಪಾಟ್ ಅಂದಗೊಂಡ ಬಳಿಕ, ನಾಲೆಯೇ ಕಸದ ತಿಪ್ಪೆಯಾಗಿ ಬದಲಾಗಿದೆ. ಕೆಲವೆಡೆ ಸಿಮೆಂಟ್ ಆಸನಗಳನ್ನು ಅಳವಡಿಸಿ, ಸಂಜೆ ಹೊತ್ತು ಕುಳಿತುಕೊಳ್ಳಲು ಸುಂದರ ತಾಣ ಮಾಡಿದ್ದಾರೆ. ವಿಚಿತ್ರವೆಂದರೆ ಕೆಲ ದುರುಳರು ಇದರ ಬುಡದಲ್ಲೇ ಕಸ ಎಸೆದು ಹೋಗುವಷ್ಟು ಸೊಕ್ಕು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ, ನಗರದ ಜನರ ಮನಸ್ಸು ಸ್ವಚ್ಛವಾಗುವವರೆಗೂ ನಗರ ಸ್ವಚ್ಛವಾಗದು ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.
ಮೆಣಸಿನಕಾಯಿ ಸಂತೆಯಲ್ಲಿ ತಿಪ್ಪೆ!
ಎಸ್‌ಪಿಎಂ ರಸ್ತೆಯ ಪ್ರಕಾಶ ಚಿತ್ರಮಂದಿರದ ಎದುರಿಗೆ ಒಣ ಮೆಣಸಿನಕಾಯಿ ಹಾಗೂ ಮಸಾಲೆ ಪದಾರ್ಥಗಳ ಮಾರಾಟ ಜೋರಾಗಿದೆ. ರಾಜ್ಯ, ಹೊರರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳು ಇಲ್ಲೇ ಠಿಕಾಣಿ ಹೂಡಿದ್ದಾರೆ. ರಾತ್ರಿ ಹೊತ್ತು ದಾಸ್ತಾನುಇಲ್ಲೇ ಇಡುತ್ತಾರೆ. ಆಹಾರ ಪದಾರ್ಥಗಳಿವೆ ಎನ್ನುವ ಅರಿವೂ ಇಲ್ಲದಂತೆ ಸ್ಥಳೀಯರು, ಕಸ ಎಸೆಯುತ್ತಿದ್ದು, ಗಬ್ಬುವಾಸನೆ ಬರುತ್ತಿದೆ. ಹೀಗಾಗಿ, ನಿತ್ಯವೂ ಪಾಲಿಕೆ ವಾಹನ ಕರೆಯಿಸಿ ತುಂಬಿಸಿ ಕಳುಹಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಮಧ್ಯೆಯೇ ಉಳಿಯುವ ಪದಾರ್ಥಗಳನ್ನು ಜನ ಖರೀದಿಸುತ್ತಿದ್ದಾರೆ.
ಸಮರ್ಥ ನಗರದಲ್ಲೂ ಇದೇ ಸಮಸ್ಯೆ:
ಸಮರ್ಥ ನಗರಕ್ಕೆ ತೆರಳುವ ದಾರಿಯಲ್ಲಿ ಯಲ್ಲಮ್ಮನ ಗುಡಿಯಿಂದ ಅಣತಿ ದೂರದಲ್ಲಿರುವ ಚುರುಮರಿ ಬಟ್ಟಿ
ಹಿಂಬದಿಯಲ್ಲೂ ನಿತ್ಯ ಇದೇ ಸಮಸ್ಯೆ. ಎರಡು ದಿನಕ್ಕೊಮ್ಮೆ ನಿಯಮಿತವಾಗಿ ಪಾಲಿಕೆ ಟಿಪ್ಪರ್ ಇಲ್ಲಿಗೆ ಬಂದು ಕಸ ಸಾಗಿಸಿದರೂ ಮರುದಿನ ಮತ್ತೆ ಇಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಕೆಲ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಅಂಗಡಿ, ಹೋಟೆಲ್‌ಗಳವರು ರಾತ್ರಿ ಚೀಲಗಳಲ್ಲಿ ತುಂಬಿ ತಂದು ಇಲ್ಲಿ ಕಸ-ಮುಸುರಿ ಎಸೆದು ಹೋಗುತ್ತಾರೆ. ನಾಯಿಗಳು ಆ ಕಸ-ಮುಸುರಿಯನ್ನು ಎಳೆದಾಡಿ ರಸ್ತೆಗೆ ತಂದುಹಾಕುವುದು ಪ್ರತಿ ದಿನದ ಕಥೆಯಾಗಿದೆ.
ಪಾಲಿಕೆ ಸದಸ್ಯರೇ ಈಚೆಗೆ ಕಸ ಎಸೆಯುವವರನ್ನು ಹಿಡಿದು ಸಾವಿರ ರೂಪಾಯಿವರೆಗೂ ದಂಡ ವಿಧಿಸಿದ ಉದಾಹರಣೆಗಳಿವೆ. ಒಂದಿಬ್ಬರು ಸದಸ್ಯರನ್ನು ಬಿಟ್ಟರೆ ಬೇರೆ ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ, ದಂಡ ವಿಧಿಸುವುದಕ್ಕೆ ಆರಂಭಿಸಿದವರೂ ಆ ಕ್ರಮವನ್ನು ಕೈಬಿಟ್ಟರು.