ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು. 
ಬೆಳಗಾವಿ

ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಗ್ಯಾರಂಟಿ

ಬೆಳಗಾವಿ:
ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರಿಗೆ ಮಾತ್ರ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದ್ದು, ಪ್ರತಿಯೊಬ್ಬ ನಾಗರಿಕರೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಡಾ. ಅಂಜಲಿ ನಿಂಬಾಳ್ಕರ್ ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಪರಿಶೀಲನೆ ಹಾಗೂ ಮೇಲುಸ್ತುವಾರಿಯ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ.60ರಷ್ಟು ಪ್ರಗತಿ ಸಾಧನೆಯಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಶೇ.70ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವಂಚನೆ ನಡೆಸಿದೆ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಿ ಮಾತ್ರ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಮತದಾರ ಕೈತಪ್ಪದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಎಸ್‌ಐಆರ್ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ.ಅದು ನಾಗರಿಕರು ತಮ್ಮ ಮತದಾನದ ಹಕ್ಕು ಕಾಪಾಡಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಎಸ್‌ಸಿ, ಎಸ್‌ಟಿ, ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ಬಿಜೆಪಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಅಂತಹ ಯಾವುದೇ ಅನ್ಯಾಯವಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ನೀಡಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಲ್ಲಪ್ಪಗೌಡ ಲಕ್ಕಾರ, ಪ್ರದೀಪ ಎಂ.ಜೆ. ಇತರರಿದ್ದರು.