ಬೈಲಹೊಂಗಲ ಮೂರುಸಾವಿರ ಶಾಖಾ ಮಠದಲ್ಲಿ ಲಿಂ.ಗಂಗಾಧರ ಸ್ವಾಮೀಜಿ 17ನೇ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು. ಪ್ರಭು ನೀಲಕಂಠ ಸ್ವಾಮೀಜಿ, ಅಭಿನವ ಶಿವಲಿಂಗ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಗಂಗಾಧರ ಶ್ರೀ ಕೊಡುಗೆ ಅಪಾರ

ಬೈಲಹೊಂಗಲ: ಹೊಸೂರ-ಬೈಲಹೊಂಗಲ ಮೂರುಸಾವಿರ ಮಠಗಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮೂಲಕ ಉಭಯ ಮಠಗಳ ಕೀರ್ತಿ ನಾಡಿನಾದ್ಯಂತ ಪಸರಿಸಿದ ಶ್ರೇಯಸ್ಸು ಲಿಂ.ಗಂಗಾಧರ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.
ಮೂರುಸಾವಿರ ಶಾಖಾಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ.ಗಂಗಾಧರ ಸ್ವಾಮೀಜಿ 17ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜ್ಞಾನ ದಾಸೋಹದ ಮೂಲಕ ಸಮಾಜಮುಖಿ ಕಾರ್ಯ ಕೈಗೊಂಡ ಲಿಂ.ಗಂಗಾಧರ ಸ್ವಾಮೀಜಿ ಆಧ್ಯಾತ್ಮಿಕ, ಶಿಕ್ಷಣ, ಅನ್ನದಾಸೋಹ ಹಾಗೂ ಸಾಮಾಜಿಕ ಸೇವೆಗೆ ಅನುಪಮ ಕೊಡುಗೆ ನೀಡಿದ್ದಾರೆ. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ. ಸಂಸ್ಥೆಯಿಂದ ಮುಂಬರುವ ದಿನಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಲಾಗುವುದು. ಪೂಜ್ಯರ ಸಿದ್ಧಾಂತ ಹಾಗೂ ಆದರ್ಶ ಮೌಲ್ಯಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಿಳಿಸಿದರು.
ಲಿಂ.ಗಂಗಾಧರ ಸ್ವಾಮೀಜಿ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ ಲಿಂ.ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ದರ್ಶನಾಶೀರ್ವಾದ ಪಡೆದು ಪುನೀತರಾದರು.
ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಚಿಕ್ಕಲಪರ್ವಿಯ ಸದಾಶಿವ ಸ್ವಾಮೀಜಿ, ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಬಳಗಾನೂರಿನ ಸಿದ್ಧಬಸವ ಸ್ವಾಮೀಜಿ ಹಾಗೂ ಯಡ್ರಾವಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕೇವಲ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸೀಮಿತರಾಗದೆ ಲಿಂ.ಗಂಗಾಧರ ಸ್ವಾಮೀಜಿ ವಿವಿಧ ಕ್ಷೇತ್ರಗಳಲ್ಲೂ ಸಲ್ಲಿಸಿದ ಸೇವೆ ಸ್ಮರಣೀಯ ಎಂದರು.
ಎಸ್‌ಎನ್‌ವಿವಿಎಸ್ ಸಂಸ್ಥೆಯ ನಿಯೋಜಿತ ವೃದ್ಧಾಶ್ರಮ ಹಾಗೂ ನೂತನ ಪ್ಯಾರಾಮೆಡಿಕಲ್ ಕೋರ್ಸ್ ಆರಂಭಕ್ಕೆ ಪ್ರಭುನೀಲಕಂಠ ಚಾಲನೆ ನೀಡಿದರು. ಬಸಯ್ಯ ಕಾಳಚರಂತಿಮಠ ಪೂಜಾ ಕೈಂಕರ್ಯ ನೆರವೇರಿಸಿದರು.
ವಿರೂಪಾಕ್ಷ ಕೋರಿಮಠ, ವಿ.ಕೆ.ಬಡಿಗೇರ,
ಸಿ.ಎಸ್.ಭಾವಿಹಾಳ, ಬಿ.ಎಸ್.ಗುರಣ್ಣವರ, ಈರಣ್ಣ ಸಂಪಗಾಂವ, ಸಂಗಯ್ಯ ಯರಗಂಬಳಿಮಠ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಮಹಾಂತೇಶ ಹೊಸಮನಿ, ಬಾಳಣ್ಣ ಶಿವಬಸಣ್ಣವರ, ನಂದು ಹರಕುಣಿ, ಶಂಕರೆಪ್ಪ ತಲ್ಲೂರ, ಶೇಖಪ್ಪ ಜತ್ತಿ, ಮಹಾಂತೇಶ ಅಕ್ಕಿ, ಕಾಶಿನಾಥ ಬಿರಾದಾರ, ಡಾ.ಸುಭಾಸ ಬಾಗಡೆ, ಸಂಸ್ಥೆ ಪ್ರಾಚಾರ್ಯರು, ಶಿಕ್ಷಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಎನ್.ಎಸ್.ಚಿಲಮೂರ ನಿರೂಪಿಸಿದರು.