ಅಥಣಿ ಹೊರವಲಯದ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ರೈತ ವಿಜ್ಞಾನಿ ಸಮಾವೇಶ ಜರುಗಿತು. ಸುಧೀಂದ್ರ ಕುಲಕರ್ಣಿ, ಸಂಜೀವ ಕುಲಕರ್ಣಿ, ಸುಹಾಸ ದಾತಾರ, ಆರ್.ಎಂ.ಪಾಟೀಲ, ಅರುಣ ಯಲಗುದ್ರಿ ಇತರರಿದ್ದರು.
ಅಥಣಿ: ಶಾಂತಿ, ಆಧ್ಯಾತ್ಮಿಕ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದ ಆಶಯವನ್ನು ಗಾಂಧಿ ಗ್ರಾಮೀಣ ಗುರುಕುಲ ಹೊಂದಿದೆ ಎಂದು ಗಾಂಧಿ ಗ್ರಾಮೀಣ ಗುರುಕುಲ ಸಂಸ್ಥಾಪಕ ಸುಧೀಂದ್ರ ಕುಲಕರ್ಣಿ ಹೇಳಿದರು.
ಪಟ್ಟಣದ ಹೊರವಲಯದ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ವಿಜ್ಞಾನಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಅವಕಾಶ ವಂಚಿತ ಜೀವ ಸಂಕುಲಕ್ಕೆ ಜ್ಞಾನ, ಮಾರ್ಗದರ್ಶನ, ಸಹಕಾರ, ಬೆಂಬಲ ಮತ್ತು ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ವೈದ್ಯ ಸಂಜೀವ ಕುಲಕರ್ಣಿ ಮಾತನಾಡಿ, ಹತ್ತಿ ಬೆಳೆಯುವ ಅಥಣಿಯ ಭೂಮಿಯಲ್ಲಿ ಇಂದು ಕಬ್ಬು ಬೆಳೆದು ಮದ್ಯ ತಯಾರಿಸುವ ಮೂಲಕ ಸಮಾಜ ಹಾಳು ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಾದದಲ್ಲಿ ಬೆಳಗಾವಿಯ ಎ.ಆರ್. ಪಾಟೀಲ ಮತ್ತು ಡಾ.ಭಾರತಿ ಬಿಜಾಪುರ ಮಾತನಾಡಿ, ಬೆಳಗಾವಿಯನ್ನು ಹನಿ ನೀರಾವರಿ ಜಿಲ್ಲೆಯನ್ನಾಗಿ ಮಾಡುವಲ್ಲಿ ಮತ್ತು ಕೃಷಿ ಆಧಾರ್ ಕಾರ್ಡ್ ತರುವಲ್ಲಿ ಗಾಂಧಿ ಗ್ರಾಮೀಣ ಗುರುಕುಲ ಪ್ರಯತ್ನ ಮಾಡಬೇಕು ಎಂದರು.
ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಎ.ಆರ್.ಪಾಟೀಲ, ಸತೀಶ ಕುಲಕರ್ಣಿ, ಅರುಣ ಯಲಗುದ್ರಿ, ಬಾಳಾಸಾಹೇಬ ಲೋಕಾಪುರ ಮಾತನಾಡಿದರು. ಗಣ್ಯರಾದ ಆರ್.ಎಂ.ಪಾಟೀಲ,ಪಿ.ಪಿ.ಮಿರಜಕರ, ರಮೇಶ ಸಿಂದಗಿ, ಸುಹಾಸ ದಾತಾರ, ನಿಂಗಪ್ಪ ಪಾಟೀಲ, ಶಶಿಧರ ಬರ್ಲಿ ಇತರರಿದ್ದರು.