ಅಥಣಿ ಗಚ್ಚಿನಮಠದದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಶಿವಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಬಸವಕಿರಣ ಸ್ವಾಮೀಜಿ ಇತರರಿದ್ದರು.
ಅಥಣಿ: ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಗಚ್ಚಿನಮಠವು ಸರ್ವಧರ್ಮೀಯರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ, ಭಕ್ತರ ಆಧ್ಯಾತ್ಮಿಕ ತಾಣವಾಗಿ, ನಾಡಿಗೆ ಮಾದರಿಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳ 105ನೇ ಜಾತ್ರಾ ಮಹೋತ್ಸವ ಮತ್ತು ಲಿಂ.ಚನ್ನಬಸವ ಸ್ವಾಮೀಜಿ 46ನೇ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ಯಾಡಗಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇಶದ ಎರಡು ಕಡೆ ಐತಿಹಾಸಿಕ ವ್ಯಾಸನ ತೋಳದ ಮೆರವಣಿಗೆ ಜರುಗುತ್ತದೆ. ಅದರಲ್ಲಿ ಅಥಣಿ ಗಚ್ಚಿನಮಠ ಒಂದು ಎನ್ನುವುದು ಇತಿಹಾಸ ಎಂದರು.
ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿವಯೋಗದ ತಪೋಭೂಮಿ ಗಚ್ಚಿನಮಠವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ ಎಂದರು. ಬೆಳಗ್ಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅಭಿಷೇಕ, ಷೋಡೋಪಚಾರ, ಮಹಾಪೂಜೆ, ಬಿಲ್ವಾರ್ಚನೆ ಬಳಿಕ ಶಿವಯೋಗಿಗಳ ಜನ್ಮಸ್ಥಳ ನದಿ ಇಂಗಳಗಾಂವದಿಂದ ಬಾಲಶಿವಯೋಗಿಗಳ ಪಲ್ಲಕ್ಕಿ ಉತ್ಸವ ಗಚ್ಚಿನಮಠ ತಲುಪಿದ ನಂತದ ಬಸವಣ್ಣವರ ವಚನ ಸಂಪುಟ ಹಾಗೂ ಶಿವಯೋಗಿಗಳು ಬರೆದ ಹಸ್ತಪ್ರತಿಗಳ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಸಾಗಿ ಗವಿಮಠದ ಪುರಾಥೇಶ್ವರ ದೇವಾಲಯ ತಲುಪಿ ಮರಳಿ ಗಚ್ಚಿನಮಠಕ್ಕೆ ಆಗಮಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ವಧರ್ಮೀಯರು ಭಕ್ತರಿಗೆ ಪಾನಕ, ಮೊಸರನ್ನ, ಮಜ್ಜಿಗೆ, ನೀರು ನೀಡಿ ದಾಹ ತಣಿಸಿದರು.