ಬೆಳಗಾವಿಯಲ್ಲಿ ಸಮಾನ ಮನಸ್ಕರ ಕನ್ನಡ ಸಂಘಟನೆಗಳ ಸಭೆಯಲ್ಲಿ ಮಹಾದೇವ ತಳವಾರ, ಅಶೋಕ ಚಂದರಗಿ, ಶ್ರೀನಿವಾಸ ತಾಳೂಕರ ಇತರರಿದ್ದರು. 
ಬೆಳಗಾವಿ

ರಾಜ್ಯದಲ್ಲೂ ಉನ್ನತಾಧಿಕಾರ ಸಮಿತಿ ರಚಿಸಿ

ಬೆಳಗಾವಿ : ಸುಪ್ರೀಂಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದ ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಬರುತ್ತಿರುವ ಹಿನ್ನೆಲೆ ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿಯಲ್ಲಿ ಮುಖ್ಯಮಂತ್ರಿ ನೇತೃತ್ವದ ಸರ್ವ ಪಕ್ಷಗಳ ಉನ್ನತಾಧಿಕಾರ ಸಮಿತಿ ಸಭೆ ರಚಿಸಬೇಕು ಎಂದು ಜಿಲ್ಲೆಯ ಸಮಾನ ಮನಸ್ಕರ ಕನ್ನಡ ಸಂಘಟನೆಗಳು ಆಗ್ರಹಿಸಿವೆ.
ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆಯಲ್ಲಿ ಈ ಕುರಿತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಚುರುಕಾ ಗಿರುವ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಜಾಗೃತಗೊಳ್ಳ ಬೇಕಿರುವ ಬಗ್ಗೆ ವಿಜಯವಾಣಿ ಮಂಗಳವಾರ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕನ್ನಡ ಸಂಘಟನೆಗಳು ಸಭೆ ನಡೆಸಿ, ಈ ವಿಷಯವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿವೆ. ಗಡಿ ಸಂರಕ್ಷಣಾ ಆಯೋಗದ ಕಚೇರಿ ಬೆಂಗಳೂರಿನಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರವಾಗಬೇಕು. ಕಿತ್ತೂರು ಕರ್ನಾಟಕದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಇದರ ಅಧ್ಯಕ್ಷರನ್ನಾಗಿ ನೇಮಿಸಬೇಕು. ಗಡಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ, ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರನ್ನು ರಾಜ್ಯ ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ಗಡಿ ಉಸ್ತುವಾರಿ ಸಚಿವರ ನೇಮಕವಾಗಬೇಕು. ಬೆಳಗಾವಿ ಮತ್ತು ಚಿಕ್ಕೋಡಿ ಸಂಸದರ ನೇತೃತ್ವದಲ್ಲಿ ಕೇಂದ್ರದ ಮೇಲೆ ನಿರಂತರ ಒತ್ತಡ ಹಾಕಲು ಸಮಿತಿ ರಚಿಸಬೇಕು. ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಸಿ ಮಹಾರಾಷ್ಟ್ರಕ್ಕೆ ತಕ್ಕ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.
ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹಾದೇವ ತಳವಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ ಚಂದರಗಿ, ವಿವಿಧ ಕನ್ನಡ ಸಂಘಟನೆಗಳ ಬಲರಾಮ ಮಾಸೇನಟ್ಟಿ, ಮಹೇಶ ಶೀಗಿಹಳ್ಳಿ, ಶ್ರೀನಿವಾಸ ತಾಳೂಕರ, ವಾಜೀದ್ ಹಿರೇಕೋಡಿ, ಮಲ್ಲಪ್ಪ ಗುಡಗೇನಟ್ಟಿ, ರಾಜು ಕೋಲಾ, ಶಿವರೆಡ್ಡಿ ಹುಚ್ಚರೆಡ್ಡಿ, ಶರೀಫ್ ಸನದಿ, ನಾಗೇಶ ಕೊಪ್ಪದ, ಬಾಳಪ್ಪ ಗುಡಗೇನಟ್ಟಿ, ಈಶ್ವರಗೌಡ ಪಾಟೀಲ, ಸಾಗರ ಬೋರಗಲ್ಲ, ಶಿವಾಜಿ ಗೊರವ, ಎಸ್.ಎಸ್.ಮೂಕನವರ, ಸಂಗೀತಾ ಕಾಂಬಳೆ, ಮಹೇಶ ಶೀಗಿಹಳ್ಳಿ ಇತರರಿದ್ದರು.

ಅಧಿಕಾರಿಗಳ ನಡೆಗೆ ಖಂಡನೆ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ವಿಚಾರದಲ್ಲಿ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿ ನಡೆಯನ್ನು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲು, ಪಾಲಿಕೆ ಎದುರು ಬಿಡಾರ ಹೂಡಿ ಪ್ರತಿನಿತ್ಯ ಸತ್ಯಾಗ್ರಹ ಆರಂಭಿಸಲು ನಿರ್ಣಯ ಕೈಗೊಂಡರು. ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸುವ ಕುರಿತು ಎಂಇಎಸ್ ನಾಯಕರಿಗೆ ಈಚೆಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದನ್ನು ಖಂಡಿಸಿದರು.