ಬೆಳಗಾವಿಯಲ್ಲಿ ಚಿರತೆ ಓಡಾಡಿದ ವದಂತಿ ಹಬ್ಬಿರುವ ಸ್ಥಳದಲ್ಲಿ ಬೋನಿಟ್ಟಿರುವ ಅರಣ್ಯ ಇಲಾಖೆ. 
ಬೆಳಗಾವಿ

ಚಿರತೆ ಸೆರೆಗೆ ಬೋನಿಟ್ಟ ಅರಣ್ಯ ಇಲಾಖೆ

ಬೆಳಗಾವಿ : ಇಲ್ಲಿನ ಕ್ಲಬ್ ರಸ್ತೆ, ಹಿಂಡಲಗಾ ಮಾರ್ಗ, ಗಾಂಧಿ ವೃತ್ತ ಹಾಗೂ ಗಾಲ್ಪ್ ಕೋರ್ಸ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಈವರೆಗೂ ಖಚಿತಗೊಂಡಿಲ್ಲ. ಆದರೆ ಚಿರತೆ ಓಡಾಡಿದೆ ಎನ್ನಲಾಗುತ್ತಿರುವ ಐದು ಪ್ರಮುಖ ಸ್ಥಳಗಳಲ್ಲಿ ಅರಣ್ಯ ಇಲಾಖೆ ಬೋನಿಟ್ಟು ಕಾಯುತ್ತಿದೆ.
ಕಳೆದ ಒಂದು ವಾರದ ಹಿಂದೆ ಇಲ್ಲಿನ ಪೊಲೀಸ್ ಕ್ವಾರ್ಟರ್ಸ್‌ ಹಿಂಭಾಗ ಹಾಗೂ ಸಿಪಿಎಡ್ ರಸ್ತೆಯಲ್ಲಿ ಚಿರತೆ ನೋಡಿದ್ದಾಗಿ ಇಬ್ಬರು ಹೇಳಿದ್ದೇ ದೊಡ್ಡ ವದಂತಿಯಾಗಿ ಹಬ್ಬಿ, ಈ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡಿದ ಕುರುಹುಗಳನ್ನು ಹುಡುಕಾಡಿದಾಗ ಯಾವುದೂ ಸ್ಪಷ್ಟವಾಗಿಲ್ಲ. ಅನೇಕ ಕಡೆಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿದ್ದು, ಈ ವರೆಗೂ ಎಲ್ಲೂ ಚಿರತೆಯ ಚಲನವಲನ ದಾಖಲಾಗಿಲ್ಲ.
ಆದರೆ ಜನತೆಯಲ್ಲಿ ಮಾತ್ರ ಆತಂಕ ದೂರವಾಗಿಲ್ಲ. ನಾಲ್ಕೈದು ದಿನದ ಹಿಂದೆ, ಕಾಡು ಬೆಕ್ಕಿನ ಫೋಟೊವೊಂದು ಸಹ ವೈರಲ್ ಆಗಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಹೀಗಾಗಿ ಐದು ಕಡೆಗಳಲ್ಲಿ ಬೋನಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ, ನಿತ್ಯವೂ ಹಗಲು ರಾತ್ರಿ ನಿಗಾ ವಹಿಸಿದ್ದಾರೆ. ಆಗಾಗ ಡ್ರೋಣ ಮೂಲಕ ಕೆಲವೊಂದು ಪ್ರದೇಶಗಳ ಮೇಲೆ ಕಣ್ಗಾವಲಿಟ್ಟಿದ್ದು, ಎಲ್ಲೂ ಚಿರತೆ ಕಂಡು ಬಂದಿಲ್ಲ.
ಈ ಹಿಂದೆ 2022ರಲ್ಲೂ ಈ ಭಾಗದಲ್ಲಿಯೇ ಚಿರತೆ ಸುಮಾರು 20 ದಿನಗಳ ಕಾಲ ಆತಂಕ ಸೃಷ್ಟಿಸಿತ್ತು. ಚಿರತೆ ಗಾಲ್ಪ್ ಕೋರ್ಸ್ ಮೈದಾನ ಮತ್ತು ಸುತ್ತಮುತ್ತ ಸೆರೆ ಹಿಡಿಯಲು ಸಾಕಷ್ಟು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಎಲ್ಲೂ ಚಿರತೆ ಸಿಕ್ಕಿರಲೇ ಇಲ್ಲ. ಕೊನೆಗೆ ಅದು ತಾನಾಗಿಯೇ ಹೊರಹೋಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ವಾರಗಳ ಕಾಲ ಸುತ್ತಮುತ್ತಲಿನ 22 ಶಾಲೆಗಳಿಗೆ ರಜೆಯೂ ನೀಡಲಾಗಿತ್ತು. ಹೀಗಾಗಿ ಮತ್ತೆ ಅದೇ ಸ್ಥಳದಲ್ಲಿ ಚಿರತೆ ಕಂಡಿದೆ ಎಂಬ ಸುದ್ದಿಯನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
"

ಚಿರತೆ ಚಲನ ವಲನದ ಬಗ್ಗೆ ಯಾವುದೇ ಸ್ಪಷ್ಟತೆ ಈವರೆಗೂ ಸಿಕ್ಕಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಬೋನಿಟ್ಟಿದ್ದೇವೆ. ನಮ್ಮ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದಾರೆ.-ಎನ್.ಇ.ಕ್ರಾಂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ