ಬೆಳಗಾವಿಯಲ್ಲಿ ಸೋಮವಾರ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಪಾರಿವಾಳ ಹಾರಿಬಿಟ್ಟು ಚಾಲನೆ ನೀಡಿದರು. ರಾಹುಲ ಶಿಂಧೆ, ಭೂಷಣ ಬೋರಸೆ, ಕೆ.ರಾಮರಾಜನ, ನಾರಾಯಣ ಬರಮನಿ ಇತರರಿದ್ದರು.
ಬೆಳಗಾವಿ : ಈಚೆಗೆ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣ ಹೆಚ್ಚಾಗಿದೆ. ಶಿರಸಾನವಿಲ್ಲದೇ ಬೈಕ್ ಓಡಿಸುವುದೇ ಇದಕ್ಕೆ ಮುಖ್ಯ ಕಾರಣ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಕಠಿಣ ನಿಯಮ ತಂದರೂ ಭೀಕರ ಅಪಘಾತಗಳು ಕಡಿಮೆಯಾಗುತ್ತಿಲ್ಲ. ಎಲ್ಲಿಯವರೆಗೆ ಜನ ಜಾಗೃತರಾಗಿ ಸಂಚಾರ ನಿಯಮ ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ಈ ಅಪಘಾತದ ಸಾವುಗಳ ಪ್ರಮಾಣವೂ ಕಡಿಮೆಯಾಗುವುದಿಲ್ಲ ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸಂಚಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಚನ್ನಮ್ಮ ವೃತ್ತದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ವಲಯದ ಐದು ಜಿಲ್ಲೆಗಳಲ್ಲಿ 2024ರಲ್ಲಿ 1900, ಕಳೆದ ವರ್ಷ 1850, ಈಗ ಜೂನವರೆಗೆ ಸುಮಾರು 900 ಭೀಕರ ಅಪಘಾತಗಳಾಗಿವೆ. ಈಗಾಗಲೇ ಪೊಲೀಸ್ ಇಲಾಖೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸಾಕಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ದಂಡ ಕಟ್ಟುವುದೇ ಎಲ್ಲದಕ್ಕೂ ಪರಿಹಾರವಲ್ಲ. ಜನ ಸ್ವಯಂ ಪ್ರೇರಣೆಯಿಂದ ನಿಯಮ ಪಾಲಿಸಬೇಕು ಎಂದರು.
ರಸ್ತೆ ಅಪಘಾತದ ಸಾವು ದೇಶದ ದೊಡ್ಡ ಸಾಮಾಜಿಕ ಕಾಯಿಲೆ. ಇದಕ್ಕೆ ಸಂಚಾರ ನಿಯಮಗಳ ಪಾಲನೆಯೇ ದೊಡ್ಡ ಮದ್ದು. ಪೊಲೀಸರು ಹೆಲ್ಮೆಟ್ ಇಲ್ಲದಾಗ ಹಿಡಿದು ದಂಡ ಹಾಕುವುದು ಅನೇಕರಿಗೆ ಕಿರಿಕಿರಿಯಾಗಬಹುದು. ಕೆಲವು ಸಲ ದಿನದ ದುಡಿಮೆ ಎಲ್ಲ ದಂಡಕ್ಕೆ ಹೋಗಬಹುದು. ಆದರೆ, ದಂಡ ಈ ಕಾಯಿಲೆ ಹೋಗಿಸುವ ಸಣ್ಣ ಚುಚ್ಚುಮದ್ದಾಗಿದೆ. ಈ ಕಾಯಿಲೆಯನ್ನು ದೇಶದಿಂದ ಶಾಶ್ವತವಾಗಿ ನಿರ್ಮೂಲನೆ ಮಾಡಲು ಜನ ಮುಂಜಾತ್ರಗೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾತನಾಡಿ, ಒಂದು ವಾರದ ಈ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿರಕರೊಂದಿಗೆ ಸಂವಹನ, ಕರಪತ್ರ ಹಂಚುವುದು, ಶಿರಸಾನ ಧರಿಸಿ ಓಡಾಡುವವರಿಗೆ ಪ್ರಶಂಸಾ ಪತ್ರ ವಿತರಣೆ, ಶಾಲಾ- ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ಅಭಿಯಾನವು ಇದೆ ಎಂದು ಹೇಳಿದರು.
ಜಿಪಂ ಸಿಇಒ ರಾಹುಲ ಶಿಂಧೆ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ನಿರಂಜರರಾಜ ಅರಸ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ಬರಮನಿ, ನಗರ ಸಶಸ ಮೀಸಲು ಪಡೆ ಡಿಸಿಪಿ ವೈ.ಕೆ.ಕಾಶಪ್ಪನವರ ವೇದಿಕೆಯಲ್ಲಿದ್ದರು.