ಬೆಳಗಾವಿಯಲ್ಲಿ ಭಾನುವಾರ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದಲ್ಲಿ ಜೈನ ಸಮುದಾಯ ಪರವಾಗಿ ಡಾ.ಪ್ರಭಾಕರ ಕೋರೆ ಅವರನ್ನು ಪಂಜಾಬ ರಾಜ್ಯಪಾಲ ಗುಲಾಬಚಂದ ಕಟಾರಿಯ ಸನ್ಮಾನಿಸಿದರು. ಅಭಯ ಪಾಟೀಲ, ಸಂಜಯ ಪಾಟೀಲ, ಅನಿತಾ ಕಟಾರಿಯಾ, ಲಲಿತ ಸಂಘ್ವಿ ಕಟಾರಿಯಾ, ನರೇಂದ್ರ ಜೈನ, ಡಾ.ವಿನೋದ ದೊಡ್ಡಣ್ಣವರ ಇದ್ದರು.
ಬೆಳಗಾವಿ: ಮಾನವನ ದುರಾಸೆಯಿಂದ ವಿಶ್ವದಲ್ಲಿ ಅಶಾಂತಿ ತಲೆದೋರಿದ್ದು, ಇದನ್ನು ಹೋಗಲಾಡಿಸುವ ಮದ್ದು ಭಗವಾನ ಮಹಾವೀರರ ತತ್ತ್ವಗಳಲ್ಲಿದೆ ಎಂದು ಪಂಜಾಬ ರಾಜ್ಯಪಾಲ ಗುಲಾಬಚಂದ ಕಟಾರಿಯಾ ಹೇಳಿದರು.
ನಗರದ ಮಹಾವೀರ ಭವನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಉದ್ಘಾಟಿಸಿ, ಪದ್ಮಶ್ರೀ ಪುರಸ್ಕೃತ ಕೆಎಲ್‌ಇ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಹಾವೀರರ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ತತ್ತ್ವಗಳನ್ನು ಪಾಲಿಸಿದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ಭಾರತ ವಿಶ್ವಕ್ಕೇ ಮಾನವತಾವಾದಿ ದಾರಿ ತೋರಿಸುತ್ತಿದೆ. ಎಲ್ಲ ರಾಷ್ಟ್ರಗಳ ಜತೆ ಬಂಧುತ್ವದ ಭಾವನೆ ಬೆಳೆಸುತ್ತಿದೆ. ಭಾರತದ ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆ ಇಲ್ಲ. ಆದರೆ ಉತ್ತಮ ದಾರಿ ತೋರಿಸುವ ಕಾರ್ಯವಾಬೇಕಿದೆ. ಇದನ್ನು ಡಾ.ಪ್ರಭಾಕರ ಕೋರೆ ಹಲವಾರು ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಅನಿತಾ ಗುಲಾಬಚಂದ ಕಟಾರಿಯಾ, ಕಟಾರಿಯಾ ಫೌಂಡೇಷನ್ ರಾಷ್ಟ್ರೀಯ ಅಧ್ಯಕ್ಷ ಲಲಿತ ಸಂಘ್ವಿ ಕಟಾರಿಯಾ, ಆದಾಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ನರೇಂದ್ರ ಜೈನ, ಸಂತೋಷ ಜೈನ, ಪ್ರವೀಣ ಬಾಫನಾ, ಡಾ.ವಿನೋದ ದೊಡ್ಡಣ್ಣವರ, ಸುನೀಲ ಹನಮಣ್ಣವರ ಇತರರಿದ್ದರು.
ರವಿರಾಜ ಪಾಟೀಲ ಸ್ವಾಗತಿಸಿದರು. ಶಾಸಕ ಅಭಯ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಅಂಕಿತ ಖೋಡಾ ನಿರೂಪಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ ವಂದಿಸಿದರು. ಸಮಾರಂಭಕ್ಕೂ ಮುನ್ನ ಸಿಪಿಇಡಿ ಮೈದಾನದಿಂದ ಆರಂಭಗೊಂಡ ಬೈಕ್ ರ‌್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾವೀರ ಭವನ ತಲುಪಿತು.
ಮಹಾತ್ಮರ ಜೀವನ ದಾರಿದೀಪವಾಗಲಿ
ಭಾರತ ವಿಶ್ವಕ್ಕೆ ಶಾಂತಿ, ಅಹಿಂಸೆ, ಸಹಬಾಳ್ವೆಯ ಸಂದೇಶ ನೀಡುವ ಏಕೈಕ ದೇಶವಾಗಿದ್ದು, ಆಧ್ಯಾತ್ಮಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಮಹಾವೀರರ ಕೊಡುಗೆ ಮಹತ್ವದ್ದಾಗಿದೆ. ಮಾನವ ಸಮಾಜದ ಸುಧಾರಣೆಗಾಗಿ ಅವರು ನೀಡಿದ ಸಂದೇಶಗಳು ಅಮೂಲ್ಯವಾಗಿವೆ. ಹಾಗೆಯೇ, 12ನೇ ಶತಮಾನದಲ್ಲಿ ಬಸವೇಶ್ವರರು, ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿದರು. ಕಾಯಕವೇ ಕೈಲಾಸ ಎಂಬ ಅವರ ತತ್ತ್ವದ ಮೂಲಕ ಕೆಲಸದ ಮಹತ್ವ ಸಾರಿದರು. ಬಸವಣ್ಣನವರು ಸಮಾನತೆ, ಸಹೋದರತ್ವ ಮತ್ತು ಸತ್ಯದ ಮೌಲ್ಯಗಳನ್ನು ಉತ್ತೇಜಿಸಿದರು. ಇಂಥವರ ಜೀವನ ತತ್ತ್ವಗಳು ನಮಗೆ ದಾರಿದೀಪವಾಗಬೇಕು ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.