ಹವಾಮಾನದಲ್ಲಿನ ನಿರಂತರ ಏರಿಳಿತದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಎಚ್1ಎನ್1 ಹಾಗೂ ಸಾಮಾನ್ಯ ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ 36 ಎಚ್1ಎನ್1 ಪ್ರಕರಣಗಳು ದಾಖಲಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಹೌದು. ಕಳೆದ ನಾಲ್ಕೈದು ವಾರಗಳ ಅವಧಿಯಲ್ಲಿ ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಕೆಲಕಾಲ ಮಳೆ, ಬಳಿಕ ಏಕಾಏಕಿ ಮೋಡ ಕವಿಯುವ ವಾತಾವರಣ ಹಾಗೂ ಮತ್ತೊಂದೆಡೆ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನದ ಈ ಬದಲಾವಣೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಶೀತ, ಕೆಮ್ಮು, ಜ್ವರ ಸೇರಿದಂತೆ ವೈರಲ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಗಮನಿಸುತ್ತಿದೆ.
ಈಗಾಗಲೇ ಬೆಂಗಳೂರು, ಮೈಸೂರು, ಧಾರವಾಡ, ವಿಜಯಪುರ, ಕಲಬುರ್ಗಿ, ಬಳ್ಳಾರಿ, ತುಮಕೂರ, ದಾವಣಗೆರೆ ಸೇರಿ ವಿವಿಧ ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಎಚ್1ಎನ್1 ಪ್ರಕರಣಗಳು ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ,ಗ್ರಾಮೀಣ ಭಾಗದಲ್ಲಿ ೂ ಸಾಮಾನ್ಯ ವೈರಲ್ ಜ್ವರದ 2ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಕೆಲವು ಭಾಗದಲ್ಲಿ ಜ್ವರದ ಪ್ರಕರಣಗಳು ಗಂಭೀರ ಸ್ವರೂಪ ಪಡೆಯುತ್ತಿರುವ ನಡುವೆ ಎಚ್1ಎನ್1 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಹನಿಗಳ ಮೂಲಕ ಎಚ್1ಎನ್1 ಸೋಂಕು ಹರಡುವ ಸಾಧ್ಯತೆ ಇದೆ. ಎಚ್1ಎನ್1 ಸೋಂಕಿಗೆ ಒಳಗಾದವರಲ್ಲಿ ಜ್ವರ, ಕೆಮ್ಮು, ಗಂಟಲು ಕೆರೆತ, ಮೂಗು ಸೋರುವಿಕೆ, ಮೈಕೈ ನೋವು, ಚಳಿ, ತಲೆನೋವು, ಆಯಾಸ, ವಾಂತಿ ಹಾಗೂ ಉಸಿರಾಟಕ್ಕೆ ತೊಂದರೆ ಕಾಣಿಸಿಕೊಳ್ಳಬಹುದು.ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು.
ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಜ್ವರ ಹಾಗೂ ಶೀತದ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡದೆ ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವೈಯಕ್ತಿಕ ಸ್ವಚ್ಛತೆ, ಸೋಂಕಿತರಿಂದ ಅಂತರ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
...............................
ಈ ಲಕ್ಷಣ ಕಂಡರೆ ನಿರ್ಲಕ್ಷೃ ಬೇಡ
ದಿನಬಿಟ್ಟು ದಿನ ಜ್ವರ, ನಿರಂತರ ಕೆಮ್ಮು, ಗಂಟಲು ಕೆರೆತ, ಮೂಗು ಸೋರುವಿಕೆ, ಮೈಕೈ ನೋವು, ಚಳಿ, ತಲೆನೋವು, ತೀವ್ರ ಅಯಾಸ, ವಾಂತಿ, ಉಸಿರಾಟದ ಸಮಸ್ಯೆ ಕಂಡು ಬಂದರೆ ತಕ್ಷಣ ಸಮೀಪ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಬೇಕು.
ಸೋಂಕು ತಡೆಗೆ ಮುನ್ನೆಚ್ಚರಿಕೆಯೇ ಮುಖ್ಯ
* ಸೋಂಕಿತರು ಮಾಸ್ಕ್ ಧರಿಸಬೇಕು
* ಸಾಬೂನು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು
* ಸೋಂಕಿತ ವ್ಯಕ್ತಿಯಿಂದ ಕನಿಷ್ಠ ಎರಡು ಮೀಟರ ಅಂತರ ಕಾಯ್ದುಕೊಳ್ಳಬೇಕು
* ಶೀತ, ಕೆಮ್ಮು ಹಾಗೂ ಜ್ವರ ಇರುವವರು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು
* ರೈಲ್ವೆ, ಬಸ್‌ಗಳಲ್ಲಿ ಪ್ರಯಾಣಿ, ಜಾತ್ರಿ, ಸಂತೆಗಳಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು
ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಾದ್ಯಂತ ಎಚ್1ಎನ್1 ಹಾಗೂ ಸಾಮಾನ್ಯ ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜನರಿಗೆ ಮುನ್ನಚ್ಚೆರಿಕೆ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಚಿಕ್ಕಮಕ್ಕಳು,ವಯಸ್ಸಾದವರು ಜನಸಂದಣಿ ಪ್ರದೇಶದಲ್ಲಿ ಓಡಾಡಬಾರದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಡಾ.ಐ.ಪಿ. ಗಡಾದ, ಜಿಲ್ಲಾ ವೈದ್ಯಾಧಿಕಾರಿ