Five murder suspects arrested
ಬೆಳಗಾವಿ: ತಾಲೂಕಿನ ಹುಂಚ್ಯಾನಟ್ಟಿ ಹೊರವಲಯದಲ್ಲಿ ಬುಧವಾರ ರಾತ್ರಿ ನಡೆದಿದ್ದ ಮಜಗಾವಿಯ ರಾಹುಲ ತಿಪ್ಪಣ್ಣ ತಳವಾರ (22) ಕೊಲೆ ಪ್ರಕರಣದಲ್ಲಿ ಕಾನೂನು ಸಂರ್ಷಕ್ಕೊಳಗಾದ ಬಾಲಕ ಸಹಿತ ಐವರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಚ್ಛೆಯ ಸೂರಜ ರಾಮು ಸಿದ್ದಗೌಳಿ (26), ಯೋಗೇಶ ಬಾಬು ದೊಡಮನಿ (28), ಪೀರನವಾಡಿಯ ಮಂಜುನಾಥ ಸುರೇಶ ಮಳಕೂರ (21), ಮಜಗಾವಿಯ ದೇಮಪ್ಪ ತಳವಾರ (26) ಹಾಗೂ ಕಾನೂನು ಸಂರ್ಷಕ್ಕೊಳಗಾದವ ಬಂಧಿತರು. ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿದ್ದು ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಮಚ್ಛೆಯ ವೀರೇಶ ಹಿರೇಮಠ, ಸೂರಜ ಸಿದ್ದಗೌಳಿ ನಡುವಿನ ಕಾರಿನ ಜಗಳದ ಮಧ್ಯ ರಾಹುಲ ಕೊಲೆಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ವೀರೇಶನು, ಸೂರಜನಿಂದ ಹಳೇ ಕಾರನ್ನು 2 ಲಕ್ಷ ರೂ.ಗೆ ಖರೀದಿಸಿ, 1 ಲಕ್ಷ ರೂ. ಮುಂಗಡ ನೀಡಿದ್ದ. ಕಾರು ಸರಿಯಿಲ್ಲದ್ದರಿಂದ ವಾಪಸ್ಸು ಕೊಟ್ಟು ಕೆಲ ದಿನ ಬಳಸಿದ್ದಕ್ಕಾಗಿ 30 ಸಾವಿರ ರೂ. ಕಡಿಮೆ ಮಾಡಿ ಉಳಿದ 70 ಸಾವಿರ ರೂ. ಮರಳಿ ಕೊಡುವ ಮಾತಾಗಿತ್ತು. ಇದರಲ್ಲಿ 20 ಸಾವಿರ ರೂ. ನೀಡಿದ್ದ ಸೂರಜ್ 50 ಸಾವಿರ ರೂ. ಬಾಕಿ ಇಟ್ಟುಕೊಂಡಿದ್ದ.
ಬುಧವಾರ ರಾತ್ರಿ ಹುಂಚ್ಯಾನಟ್ಟಿ ಗ್ರಾಮದ ಹೊರವಲಯದಲ್ಲಿ ವೀರೇಶ, ರಾಹುಲ ಹಾಗೂ ಇತರ ಗೆಳೆಯರೊಂದಿಗೆ ಪಾರ್ಟಿ ಮಾಡಲು ಹೋಗಿದ್ದಾಗ ಇತರರು ಕೈಯಲ್ಲಿ ತಲ್ವಾರ್ ಹಿಡಿದು ಕಾರಿನ ಬಾಕಿ ಹಣದ ವಿಷಯದಲ್ಲಿ ಜಗಳಕ್ಕೆ ಬಂದಿದ್ದಾರೆ. ಆಗ ರಾಹುಲ ಜಗಳ ಬಗೆಹರಿಸಲು ಮಧ್ಯ ಪ್ರವೇಶಿಸಿ, ಆರೋಪಿತರನ್ನು ಪಕ್ಕಕ್ಕೆ ಕರೆದು ಮಾತನಾಡಿಸಲು ಪ್ರಯತ್ನಿಸಿದಾಗ, ತಲ್ವಾರ್ನಿಂದ ಬೆನ್ನಿಗೆ, ತಲೆಗೆ, ಕೈಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ವೀರೇಶ ದೂರಿನಲ್ಲಿ ತಿಳಿಸಿದ್ದಾನೆ.