ಚಿಕ್ಕೋಡಿ ತಾಲೂಕಿನ ಕೃಷ್ಣಾನದಿ ನೀರು ಹೆಚ್ಚಳದಿಂದ ಯಡೂರ-ಕಲ್ಲೋಳ ಕೆಳ ಹಂತದ ಸೇತುವೆ ಮುಳುಗಡೆ ಆಗಿರುವುದು. 
ಬೆಳಗಾವಿ

ಕೆಳ ಹಂತದ 5 ಸೇತುವೆ ಮುಳುಗಡೆ

ಶಂಕರ ಗೆಜ್ಜಿ
ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ನೀರಿನ ಮಟ್ಟ ಭಾನುವಾರ ಮತ್ತಷ್ಟು ಏರಿಕೆಯಾಗಿದೆ.
ಕೊಯ್ನ ಜಲಾನಯನ ಪ್ರದೇಶ ಮತ್ತು ಕೃಷ್ಣ ಅಚ್ಚಕಟ್ಟು ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ 42 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜತೆಗೆ ವೇದಗಂಗಾ, ದೂಧಗಂಗಾ ನದಿಗಳ ನೀರು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್‌ದಲ್ಲಿ ಕೃಷ್ಣಾ ನದಿಗೆ ಒಟ್ಟು 53 ಸಾವಿರ ಒಳ ಹರಿವು ದಾಖಲಾಗಿದೆ.
ಒಂದು ವಾರದ ಹಿಂದೆ ಬರಿದಾಗಿದ್ದ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಘಟಪ್ರಭಾ ನದಿಗಳು ಮಳೆಯಿಂದ ಮೈದುಂಬಿ ಹರಿಯುತ್ತಿವೆ.
ಕೆಳ ಹಂತದ ಸೇತುವೆ ಜಲಾವೃತ: ಜಿಲ್ಲೆಯ ನದಿಗಳ ನೀರಿನ ಮಟ್ಟ ಹೆಚ್ಚಳದಿಂದ ಕೆಳ ಹಂತದ ಸೇತುವೆ ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನಲ್ಲಿ ಹರಿಯುವ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜ-ಕಾರದಗಾ, ವೇದಗಂಗಾ ನದಿಗೆ ನಿರ್ಮಿಸಿರುವ ಭೋಜವಾಡಿ-ಕುನ್ನೂರ, ಭೋಜವಾಡಿ-ಗಜಬರವಾಡಿ, ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರ-ಕಲ್ಲೋಳ, ಮಹಾರಾಷ್ಟ್ರ ಸಂಪರ್ಕಿಸುವ ರಾಜಾಪುರ-ಜುಗೂಳ ಸೇತುವೆ ಜಲಾವೃತಗೊಂಡಿದ್ದು, ಜನರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.