ಬೆಳಗಾವಿ ಮಹಾನಗರದಲ್ಲಿ ರಸ್ತೆಯ ಮೇಲೆ ಕಸ ಎಸೆಯದಂತೆ ಸಾರ್ವಜನಿಕರಿಗೆ ಆಯುಕ್ತ ಕಾರ್ತಿಕ.ಎಂ. ಜಾಗೃತಿ ಮೂಡಿಸಿದರು. ಹಣಮಂತ ಕಲಾದಗಿ ಇತರರಿದ್ದರು. 
ಬೆಳಗಾವಿ

ಕಸ ಎಸದಿದ್ದವರಿಂದ 1.50ಲಕ್ಷ ರೂ. ದಂಡ ವಸೂಲಿ

ಬೆಳಗಾವಿ:
ಮಹಾನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪಾಲಿಕೆ ಅಧಿಕಾರಿ, ಸಿಬ್ಬಂದಿ ವರ್ಗ ರಸ್ತೆಯ ಮೇಲೆ ಕಸ ಎಸೆಯುವವರಿಗೆ ಮತ್ತು ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಮಾಡದವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಪಾಲಿಕೆ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಸ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ನಿವಾಸಿಗಳು, ಹೋಟೆಲ್, ಅಂಗಡಿಕಾರರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡದಿರುವ ಮತ್ತು ರಸ್ತೆಯ ಬದಿಯಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತಿರುವವರಿಗೆ ತಲಾ 5000 ರೂ. ದಿಂದ 2000 ರೂ. ರಂತೆ 25ಕ್ಕೂ ಅಧಿಕ ಜನರಿಗೆ ದಂಡ ವಿಧಿಸಲಾಗಿದೆ. ಒಂದೇ ವಾರದಲ್ಲಿ ಸ್ವಚ್ಛತೆ ನಿಯಮ ಉಲ್ಲಂಘಿಸಿದವರಿಗೆ ದಂಡದ ರೂಪದಲ್ಲಿ ಬರೋಬ್ಬರಿ 1.50 ಲಕ್ಷ ರೂ. ವಸೂಲಿ ಮಾಡಿ ಎಚ್ಚರಿಕೆ ನೋಟೀಸ್ ನೀಡಲಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿಗಾಗಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಸ್ಪಂದಿಸದಿರುವ ಹಿನ್ನೆಲೆ ಕಸ ವಿಲೇವಾರಿ ದಿನದಂದ ದಿನಕ್ಕೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರುಕಟ್ಟೆ, ಹೋಟೆಲ್, ಸರ್ಕಾರಿ, ಖಾಸಗಿ ಕಚೇರಿ ಅಧಿಕಾರಿಗಳಿಗೆ , ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಲಾಗುತ್ತಿದೆ. ಕೆಲವು ಭಾಗದಲ್ಲಿ ಕಸದ ವಾಹನಕ್ಕೆ ತ್ಯಾಜ್ಯ ಹಾಕುವ ಬದಲು ರಸ್ತೆಯ ಬದಿ, ಚರಂಡಿಯಲ್ಲಿ ಕಸ ಎಸೆದು ಹೋಗುತ್ತಿರುವವರನ್ನು ಪತ್ತೆ ಹಚ್ಚಿ ಬಿಸಿ ಮುಟ್ಟಿಸಿಲಾಗಿದೆ. ನಿಯಮ ಉಲ್ಲಂಘಿಸಿರುವ ಕೆಲ ಹೋಟೆಲ್ ಪರವಾನಗಿ ರದ್ದುಪಡಿಸಲು ಕ್ರಮ ವಹಿಸಲಾಗಿದೆ.
ಸದ್ಯ ಬೆಳಗಾವಿ ನಗರದಲ್ಲಿ ನಿತ್ಯ 150 ಟನ್ ಹಸಿ ಹಾಗೂ 100 ಟನ್ ಒಣ ಕಸ ಸೇರಿ ಒಟ್ಟು 300ಕ್ಕೂ ಅಧಿಕ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಆದರೆ, ಹಸಿ ಮತ್ತು ಒಣ ಕಸ ಒಟ್ಟಿಗೆ ಸಂಗ್ರಹಿಸುತ್ತಿರುವ ಪರಿಣಾಮ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆಗೆ ಸಮಸ್ಯೆ ಎದುರಾಗುತ್ತಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಟ್ಟರೆ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ಹಣ ಉಳಿತಾಯವಾಗುತ್ತಿದೆ. ಹೀಗಾಗಿ ಕಸ ವಿಂಗಡನೆ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿ ಹಣಮಂತ ಕಲಾದಗಿ ತಿಳಿಸಿದ್ದಾರೆ.
..............
ಕೋಟ್ಸ್
ನಗರದಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯುವವರಿಗೆ ದಂಡ ವಿಧಿಸುವ ಮೂಲಕ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡಬೇಕು. ಪಾಲಿಕೆಯ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು, ಅಂಗಡಿಕಾರರು ಕೈ ಜೋಡಿಸಬೇಕು.
- ಕಾರ್ತಿಕ್.ಎಂ, ಪಾಲಿಕೆ ಆಯುಕ್ತ
.............