ಬೆಳಗಾವಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಗುರುವಾರ ಜರುಗಿದ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಗಳ ಪದಾಧಿಕಾರಿಗಳು, ಗಣೇಶ ಮೂರ್ತಿಕಾರರ ಪೂರ್ವಭಾವಿ ಸಭೆಯಲ್ಲಿ ಡಿಸಿ ಮೊಹಮ್ಮದ ರೋಷನ್ ಮಾತನಾಡಿದರು. ಪ್ರೀತಿ ಕಾಮಕರ, ಹಣಮಂತ ಕೊಂಗಾಲಿ ಇತರರಿದ್ದರು.  
ಬೆಳಗಾವಿ

ಗಣೇಶ ಮಂಡಳಿಗಳ ವಿದ್ಯುತ ಶುಲ್ಕಕ್ಕೆ ಹಣಕಾಸು ನೆರವು

ಬೆಳಗಾವಿ:

ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಗಳಿಗೆ ವಿದ್ಯುತ್ ಶುಲ್ಕ ಭರ್ತಿಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಭರವಸೆ ನೀಡಿದರು.

ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ. ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಗಳ ಪದಾಧಿಕಾರಿಗಳು, ಗಣೇಶ ಮೂರ್ತಿಕಾರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಹಳಷ್ಟು ವಿಶಿಷ್ಟವಾಗಿರುವ ಬೆಳಗಾವಿಯ ಗಣೇಶೋತ್ಸವ ಸೌಹಾರ್ಧತೆಯಿಂದ ದೇಶಕ್ಕೇ ಮಾದರಿಯಾಗುವಂತೆ ಆಚರಿಸೋಣ. ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಕೈಜೋಡಿಸಿದ್ದು, ಗಣೇಶ ಚತುರ್ಥಿಗೆ ಸಾಕಷ್ಟು ಮುಂಚಿತವಾಗಿಯೇ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನಗರದಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾರ್ಗದಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಿ ರಸ್ತೆ ದುರಸ್ತಿಗೊಳಿಸಬೇಕು. ಮೂರ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿಕಾರಕ ಆಗದಂತೆ ರಸ್ತೆಗಳನ್ನು ನಿರ್ಮಿಸಬೇಕು. ಎಲ್ ಆ್ಯಂಡ್ ಟಿ ಅವರು ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯುವ ಮುನ್ನ ಪರವಾನಗಿ ಪಡೆದುಕೊಳ್ಳಬೇಕು. ಅದರಲ್ಲಿ ಪ್ರಮುಖ ವಿಸರ್ಜನೆ ಮಾರ್ಗದಲ್ಲಿ ರಸ್ತೆ ಅಗೆಯುವ ಮುನ್ನ ಎಲ್ಲರ ಒಪ್ಪಿಗೆ ಪಡೆದುಕೊಳ್ಳಬೇಕು. ಪೊಲೀಸ್ ಯುಕ್ತರು, ಪಾಲಿಕೆ ಆಯುಕ್ತರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಗರ ಪೊಲೀಸ ಆಯುಕ್ತ ಭೂಷಣ ಬೋರಸೆ ಮಾತನಾಡಿ, ಗಣೇಶೋತ್ಸವ ಮಂಡಳಿಗಳು ಪೊಲೀಸ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೆಂಡಾಲ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಡಿಜೆ ಬಳಕೆ ಸಂಪೂರ್ಣ ನಿಷೇಧವಿದ್ದು, ನಿಯಮ ಉಲ್ಲಂಘಿಸಿ ಯಾರು ಬಳಕೆ ಮಾಡುವಂತಿಲ್ಲ. ಗಣೇಶೋತ್ಸವದಲ್ಲಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ನಿಗದಿತ ಮಿತಿಯನ್ನು ಪಾಲಿಸಬೇಕು.
ದಿನನಿತ್ಯದ ರಕ್ಷಣಾ ಕಾರ್ಯಗಳ ಜತೆಗೆ ಗಣೇಶೋತ್ಸವ ಸಂದರ್ಭದಲ್ಲಿ ಸಿಬ್ಬಂದಿಗೆ ಹೆಚ್ಚಿನ ಕಾರ್ಯ ಭಾರವಿರುವುದು ಹಿನ್ನೆಲೆಯಲ್ಲಿ ಮಂಡಳಿಗಳ ಪದಾಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾವಲು ಹಾಕಲಾಗುವುದು. ಮೂರ್ತಿ ಎತ್ತರ , ವಿದ್ಯುತ್ ಅಲಂಕಾರ, ಪೆಂಡಾಲ್ ಸೇರಿದಂತೆ ಪೊಲೀಸರ ನಿಯಮಗಳನ್ನು ಪಾಲಿಸಬೇಕು ಎಂದರು.
ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮಾತನಾಡಿ, ನಗರದಲ್ಲಿ ನಡೆಯುವ11 ದಿನಗಳ ಗಣೇಶೋತ್ಸವಕ್ಕೆ ಮಹಾನಗರ ಪಾಲಿಕೆಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು. ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹೊಂಡಗಳ ಬಳಿ ಕ್ರೇನ್‌ಗಳು, ತಂತ್ರಜ್ಞರು ಹಾಗೂ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗುವುದು.
ಮೇಯರ ಪ್ರೀತಿ ಕಾಮಕರ, ಉಪಮೇಯರ್ ಹಣಮಂತ ಕೊಂಗಾಲಿ,ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ಗಣಪತಿ ಉತ್ಸವ ಮಹಾಮಂಡಳ ಅಧ್ಯಕ್ಷ ವಿಕಾಸ ಕಲಘಟಗಿ, ಉಪಾಧ್ಯಕ್ಷ ಸಾಗರ ಪಾಟೀಲ ಇತರರಿದ್ದರು.