ಅಥಣಿ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಿವಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವಿವೇಕಾನಂದ ಸ್ವಾಮೀಜಿ, ಶಿವಾನಂದ ದಿವಾನಮಳ, ಹನುಮಂತ ಕಾಲುವೆ, ಸಿದ್ದಣ್ಣ ಮಹಾಜನ ಇತರರಿದ್ದರು.  
ಬೆಳಗಾವಿ

ಇಂದಿನಿಂದ ಉತ್ಸವ

ವಿದ್ಯಾ ಶೆಟ್ಟನಗೌಡ್ರ
ಅಥಣಿ: ಮಹಾಶಿವರಾತ್ರಿ ಅಂಗವಾಗಿ ಗಚ್ಚಿನಮಠದಲ್ಲಿ ಫೆ.೧೩ರಿಂದ ೧೬ರವರೆಗೆ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.೧೩ರಂದು ಸಂಜೆ ೬.೩೦ಗಂಟೆಗೆ ಜೀವನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮ ಜರುಗುವುದು. ಫೆ.೧೪ರಂದು ಸಂಜೆ ೬.೩೦ ಗಂಟೆಗೆ ಶರಣ ಸಂಸ್ಕೃತಿ ಉತ್ಸವವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸುವರು. ಫೆ.೧೫ರಂದು ಬೆಳಗ್ಗೆ ೭.೩೦ ಗಂಟೆಗೆ ಇಷ್ಟಲಿಂಗ ಪೂಜೆ, ಬಳಿಕ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಮತ್ತು ಮಹಾಶಿವರಾತ್ರಿಯ ಶಿವಯೋಗ ಮತ್ತು ಮಹಾದಾಸೋಹ ಜರುಗುವುದು. ಸಂಜೆ ೬ ಗಂಟೆಗೆ ಬಸವ ತತ್ತ್ವ ಚಿಂತನಗೋಷ್ಠಿಯಲ್ಲಿ ಅತಿಥಿಗಳಾಗಿ ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಭಾಗವಹಿಸುವರು.
ನಂತರ ಸಾಹಿತಿ ಯರವೀನ ತೇಲಿಮಠ ಸಂಪಾದಿಸಿದ ಶಿವ ಇನ್‌ಕಾರ್ನೇಟ್ ಶ್ರೀ ಮುರುಘೇಂದ್ರ ಶಿವಯೋಗಿ ಆಫ್ ಅಥಣಿ ಗ್ರಂಥ ಲೋಕಾರ್ಪಣೆಯಾಗಲಿದೆ. ಗ್ರಂಥದಾನಿ ಅಶ್ವಿನಿ ಕಾವೇರಿ ಭಾಗವಹಿಸುವರು. ರಾತ್ರಿ ೧೦ ಗಂಟೆಗೆ ಶಿವರಾತ್ರಿ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗುವುದು.
ಫೆ.೧೬ರಂದು ಸಿದ್ಧಲಿಂಗ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಬೆಳಗ್ಗೆ ೯ ಗಂಟೆಗೆ ವಚನ ಸಂಪುಟಗಳ ಪಲ್ಲಕ್ಕಿ ಉತ್ಸವ ಜರುಗುವುದು. ಅತಿಥಿಗಳಾಗಿ ಚಿದಾನಂದ ಸವದಿ ಪಾಲ್ಗೊಳ್ಳುವರು ಎಂದರು.