ಯರಗಟ್ಟಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು 
ಬೆಳಗಾವಿ

ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ !

-
ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಕಬ್ಬಿಗೆ ನ್ಯಾಯಯುತ ಬೆಲೆಗಾಗಿ ತಿಂಗಳಗಟ್ಟಲೇ ಹೋರಾಟ ನಡೆಸಿದ್ದ ಬೆಳೆಗಾರರು ಇದೀಗ ಸಕಾಲಕ್ಕೆ ಕಬ್ಬು ಕಟಾವಿಗೆ ಕಾರ್ಮಿಕರು ಸಿಗದಂತಾಗಿದ್ದು, ಬೆಳೆ ಒಣಗುವ ಮುನ್ನ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಕಾರ್ಖಾನೆಗೆ ಒಂದು ಲಾರಿ, ಟ್ರಾಕ್ಟರ್‌ನಲ್ಲಿ ಕಬ್ಬು ಸಾಗಿಸಲು ಹೆಚ್ಚುವರಿಯಾಗಿ 3,500 ರೂ. ನೀಡಬೇಕಾಗಿದೆ.
ಹೌದು. ಪ್ರಸಕ್ತ ವರ್ಷ ಉತ್ತಮ ಮಳೆ ಸುರಿದಿದ್ದರಿಂದ ಹೊಸ ಮತ್ತು ಕುಳೆ ಕಬ್ಬು ಬೆಳೆ ಉತ್ತಮವಾಗಿ ಬೆಳೆದಿದೆ. ಆದರೆ, ಕಬ್ಬಿನ ದರಕ್ಕಾಗಿ ರೈತರ ಹೋರಾಟ, ಕಾರ್ಮಿಕರ ಕೊರತೆ, ಸಕಾಲಕ್ಕೆ ಕಾರ್ಖಾನೆಗಳು ಆರಂಭವಾಗದಿರುವುದು ಇತರೆ ಕಾರಣಗಳಿಂದಾಗಿ ಕಬ್ಬು ಬೆಳೆದು 18 ತಿಂಗಳು ಕಳೆದಿದ್ದರೂ ಕಬ್ಬು ಸಾಗಾಣಿಕೆ ಮಾಡಲು ಬೆಳೆಗಾರರು ಪರದಾಡುತ್ತಿದ್ದಾರೆ. ಕೆಲ ಭಾಗದಲ್ಲಿ ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಗ್ಯಾಂಗ್‌ಗಳು ಮುಂದಾಗುತ್ತಿದ್ದು, ಹಣ ನೀಡಲು ಸಾಧ್ಯವಾಗದ ಬಡರೈತರು ಕಂಗಾಲಾಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಕಬ್ಬು ಕಟಾವಿಗೆ ಕಾರ್ಖಾನೆ ವತಿಯಿಂದ ಹಣ ನೀಡುತ್ತಿದ್ದರೂ, ಗ್ಯಾಂಗ್‌ಗಳು ರೈತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ. ಕಬ್ಬು ಕಟಾವಿಗೆ ಬಂದಿರುವ ಯಂತ್ರಗಳ ಮಾಲೀಕರು, ಕಬ್ಬು ಕಟಾವು ಕಾರ್ಮಿಕರು ರೈತರಿಂದ ಪ್ರತಿ ಟನ್‌ಗೆ 250 ರೂ.ಗೆ ಬೇಡಿಕೆ ಇಡುತ್ತಿದ್ದಾರೆ. ಕಾರ್ಖಾನೆಗೆ ಒಂದು ಲಾರಿ ಕಬ್ಬು ಸಾಗಿಸಲು ಚಾಲಕನಿಗೆ ಭತ್ಯೆಯಾಗಿ 500 ರೂ. ಕಟಾವು ಯಂತ್ರ ಚಾಲಕನಿಗೆ ದಿನಕ್ಕೆ -800 ರೂ., ಯಂತ್ರದ ಮಾಲೀಕನಿಗೆ ಟನ್‌ಗೆ ಹೆಚ್ಚುವರಿಯಾಗಿ 300 ರೂ.ನೀಡಬೇಕಾಗಿದೆ. ಕಟಾವು ಗ್ಯಾಂಗ್, ಟ್ರಾೃಕ್ಟರ್ ಮಾಲೀಕರು ಕೂಡ ಟನ್ ಕಬ್ಬಿಗೆ 200 ರಿಂದ 300 ರೂ. ಬೇಡಿಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಕಾರ್ಖಾನೆಗೆ ಕಬ್ಬು ಸಾಗಿಸಲು ಹಚ್ಚುವರಿಯಾಗಿ 2500 ರಿಂದ 3000 ರೂ. ವರೆಗೆ ವೆಚ್ಚ ಮಾಡಬೇಕಾಗಿದೆ.
ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಕಬ್ಬು ನುರಿಸುವ ಹಂಗಾಮು ಆರಂಭಿಸಿದರೆ ಕಬ್ಬು ಕಟಾವು, ಸಾಗಾಣಿಕಗೆ ಯಾವುದೇ ಖರ್ಚು ಇಲ್ಲದೆ ಬೆಳೆಗಾರರು ಕಬ್ಬನ್ನು ಕಾರ್ಖಾನೆಗೆ ಕಳುಹಿಸುತ್ತಿದ್ದರು. ಆದರೆ, ರೈತರ ಹೋರಾಟದ ಪರಿಣಾಮ ಕಾರ್ಖಾನೆಗಳು ಒಂದು ತಿಂಗಳು ತಡವಾಗಿ ಕಬ್ಬು ನುರಿಸಲು ಆರಂಭಿಸಿರುವ ಪರಿಣಾಮ ಕಬ್ಬು ಸಾಗಾಣಿಕೆ, ಕಟಾವು ಬೆಳೆಗಾರರಿಗೆ ದುಬಾರಿಯಾಗಿ ಪರಿಣಮಿಸಿದ್ದು, 18 ರಿಂದ 22ಟನ್ ತೂಕದ ಕಬ್ಬು ತುಂಬಿದ ಒಂದು ಟ್ರಾೃಕ್ಟರ್‌ನಷ್ಟು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲು ಹೆಚ್ಚುವರಿಯಾಗಿ 2500 ರಿಂದ 3000 ರೂ. ನೀಡಬೇಕು. ಒಂದು ಎಕರೆ ಪ್ರದೇಶದಲ್ಲಿ ಸುಮಾರು 2ರಿಂದ 3 ಟ್ರಾೃಕ್ಟರ್‌ನಷ್ಟು ಕಬ್ಬು ಬೆಳೆದಿದ್ದರೆ, ಟ್ರಾೃಕ್ಟರ್ ಕಬ್ಬಿಗೆ 3000 ರೂ. ( ಕಟಾವು ಗ್ಯಾಂಗ್-1500, ವಾಹನ ಮಾಲೀಕರಿಗೆ 1500) ರಂತೆ ಒಂದು ಎಕರೆಗೆ ಕನಿಷ್ಠ 10 ಸಾವಿರ ರೂ. ವರೆಗೆ ಹೆಚ್ಚುವರಿಯಾಗಿ ಕೊಡಬೇಕಾಗಿದೆ. ಕೆಲ ಭಾಗದಲ್ಲಿ ವಿದ್ಯುತ್ ಅವಘಡ ಇಲ್ಲವೆ ಇತರೆ ಕಾರಣಗಳಿಂದ ಕಬ್ಬಿನ ಬೆಳೆ ಬೆಂಕಿಗೆ ತಗಲು ಹಾನಿಯಾಗಿದ್ದರೂ ಕಾರ್ಮಿಕರು ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
.................................
ಬಾಕ್ಸ್
ಕಾರ್ಖಾನೆ, ರೈತರಿಗೆ ಲಕ್ಷಾಂತರ ರೂ. ನಷ್ಟ
ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 54 ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರು ಕಬ್ಬು ಕಟಾವು, ಸಾಗಾಣಿಕೆ ಮಾಡಲು ಮಹಾರಾಷ್ಟ್ರದ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮಿಗೆ ಮಹಾರಾಷ್ಟ್ರದಿಂದ ಅಂದಾಜು 1,400 ಗ್ಯಾಂಗ್‌ಗಳು ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕುಟುಂಬ ಸಮೇತ ಆಗಮಿಸುತ್ತಿವೆ. ಈ ಕಾರ್ಮಿಕರ ಗ್ಯಾಂಗ್‌ಗಳಿಗೆ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಸಾಗಾಣಿಕೆ ಮಾಡುವ ಟ್ರಾೃಕ್ಟರ್‌ಗಳ ಮಾಲೀಕರು ಮುಂಗಡವಾಗಿ 10 ರಿಂದ 15 ಲಕ್ಷ ರೂ. ಹಣ ನೀಡುತ್ತವೆ. ಆದರೆ, ಬಹುತೇಕ ಗ್ಯಾಂಗ್‌ಗಳು ಬಾರದ ವಂಚನೆ ಮಾಡುತ್ತಿವೆ. ಇದರಿಂದಾಗಿ ಪ್ರತಿವರ್ಷ ಕೋಟ್ಯಂತರ ರೂ. ವಂಚನೆ ಆಗುತ್ತಿದೆ ಎಂದು ವಾಹನ ಮಾಲೀಕರಾದ ರಮೇಶ ಪಾಟೀಲ, ಪರುಶರಾಮ ಮಾದರ ದೂರಿದ್ದಾರೆ.
.............
ಬಾಕ್ಸ್
ಪ್ರಸ್ತುತ ರಾಜ್ಯದಲ್ಲಿ ಕಬ್ಬು ಬೆಳೆದ ಪ್ರದೇಶ ವಿವರ
ವಿಭಾಗ ಹೆಕ್ಟೇರ್
ಕುಳೆ 4,40,324
ಹೊಸ ಕಬ್ಬು 3,05,230
ಒಟ್ಟು 7,45,554
.......................... ........ .
ಪೋಟೋ
15ಮಂಜು3- ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕನಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು