2025 ನ.11ರಂದು ನಡೆದ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ, ಇದುವರೆಗೆ 80 ದಿನಗಳ ಕಾಲ ಎಲ್ಲ ಕಾಲುವೆಗಳ ಮೂಲಕ ನೀರು ಹರಿಸಲಾಗಿದೆ. ಜ.29ಕ್ಕೆ ಜಲಾಶಯದ ನೀರಿನ ಮಟ್ಟ 2066.91 ಅಡಿಗೆ ಇಳಿದಿದ್ದು, ಕೇವಲ 19.333 ಟಿಎಂಸಿ ಉಪಯುಕ್ತ ನೀರು ಮಾತ್ರ ಲಭ್ಯವಿದೆ. ಇದರಲ್ಲಿ 15.50 ಟಿಎಂಸಿ ನೀರನ್ನು ಜುಲೈ 2026ರ ಅಂತ್ಯದವರೆಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸಬೇಕಿರುವ ಹಿನ್ನೆಲೆಯಲ್ಲಿ, ಉಳಿದಿರುವ 3.83 ಟಿಎಂಸಿ ನೀರನ್ನು ಮಾತ್ರ ಕಷಿ ಉದ್ದೇಶಕ್ಕೆ ಬಳಸಬೇಕಿದೆ.
ಇದು ಕೇವಲ ಸೀಮಿತ ಅವಧಿಗೆ ಮಾತ್ರ ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಉಳಿದಿರುವ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಫೆ.15ರಿಂದ ಎಲ್ಲ ಕಾಲುವೆಗಳ ಮೂಲಕ ಕಷಿ ಉದ್ದೇಶಕ್ಕಾಗಿ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.
ಈ ನಿರ್ಧಾರ ಹಿಂಗಾರು ಬೆಳೆಗಳ ಮೇಲೆ ಭರವಸೆ ಇಟ್ಟುಕೊಂಡಿದ್ದ ರೈತರಿಗೆ ಹೊಡೆತ ನೀಡಿದೆ. ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಬಹುತೇಕ ಬೆಳೆಗಳು ರೈತರ ಕೈಸೇರದೇ ಸಂಪೂರ್ಣ ನಷ್ಟವಾಗಿವೆ. ಈಗ ನೀರು ಸ್ಥಗಿತಗೊಂಡರೆ ಹಿಂಗಾರು ಬೆಳೆಗಳಿಗೆ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.