ಹನಿ, ತುಂತುರು ನೀರಾವರಿ 
ಬೆಳಗಾವಿ

ಹನಿ, ತುಂತುರು ನೀರಾವರಿಯತ್ತ ರೈತರ ಚಿತ್ತ!

,ಬೆಳಗಾವಿ: ಮಳೆ ಅಭಾವ, ನೀರಿನ ಕೊರತೆ, ಕೃಷಿ ವೆಚ್ಚ ಏರಿಕೆ ಹಾಗೂ ಬೆಳೆಗಳ ಇಳುವರಿ ಕುಸಿತದಂತಹ ಸಂಕಷ್ಟಗಳಿಂದ ಬಳಲುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರು ಇದೀಗ ತುಂತುರು ಮತ್ತು ಹನಿ ನೀರಾವರಿ ಸಬ್ಸಿಡಿ ಯೋಜನೆಯತ್ತ ಮುಖ ಮಾಡಿದ್ದಾರೆ!
ಹೌದು. ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಸರಿಯಾದ ಮಳೆ ಆಗದಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ನದಿ, ಕಾಲುವೆ ಹಾಗೂ ಕೊಳವೆ ಬಾವಿ ಆಧಾರಿತ ನೀರಾವರಿ ಪ್ರದೇಶದ ಕಬ್ಬು ಬೆಳೆಗಾರರು ಸೇರಿ ವಿವಿಧ ಬೆಳೆಗಳ ರೈತರು ಕಡಿಮೆ ಖರ್ಚಿ ಹೆಚ್ಚು ಆದಾಯ, ಇಳುವರಿ ಹೆಚ್ಚಳ ಹಾಗೂ ಕೃಷಿ ಬೆಳಗನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹನಿ, ತುಂತುರು ನೀರಾವರಿಯತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಸಬ್ಸಿಡಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ರೈತರ ಸಂಖ್ಯೆ ಶೇ.28ರಷ್ಟು ಹೆಚ್ಚಳವಾಗಿದೆ.
ಜಿಲ್ಲೆಯಾದ್ಯಂತ 2014 ರಿಂದ 2025 ರ ನಡುವಿನ ಅವಧಿಯಲ್ಲಿ ಸಲ್ಲಿಕೆಯಾಗಿರುವ ಒಟ್ಟು 2.17 ಲಕ್ಷ ಅರ್ಜಿಗಳ ಪೈಕಿ 1.92 ಲಕ್ಷ ಅರ್ಜಿಗಳು ವಿಲೇವಾರಿಯಾಗಿವೆ. ಇನ್ನೂ 25 ಸಾವಿರ1 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಅನುದಾನ ಬಾರದಿರುವುದು, ತಾಂತ್ರಿಕ ಸಮಸ್ಯೆ ನಾನಾ ಕಾರಣಗಳಿಂದಾಗಿ ಸಬ್ಸಿಡಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸಮಯಕ್ಕೆ ಸರಿಯಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ವಿಳಂಬವಾಗುತ್ತಿದೆ.
ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಸವದತ್ತಿ, ಯರಗಟ್ಟಿ,ಬೈಲಹೊಂಗಲ, ರಾಮದುರ್ಗ, ಗೋಕಾಕ, ರಾಯಬಾಗ, ಹುಕ್ಕೇರಿ, ಕಾಗವಾಡ, ಮೂಡಲಗಿ ತಾಲೂಕಿನ ವ್ಯಾಪ್ತಿಯ ರೈತರು ಹನಿ, ತುಂತುರು ನೀರಾವರಿಯತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿನ ರೈತರು ಕೊಳವೆ ಬಾವಿ ಕೊರೆಯಿಸಿ ಕೃಷಿ ಹೊಂಡದ ಮೂಲಕ ನೀರಾವರಿ ಪದ್ದತಿ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಹೀಗಾಗಿ ನೀರಾವರಿ ಸಬ್ಸಿಡಿ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ರಾಜ್ಯ ಸರ್ಕಾರವು ತುಂತುರು, ಹನಿ ನೀರಾವರಿ ಯೋಜನೆ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90ರಷ್ಟು ಸಬ್ಸಿಡಿ ನೀಡುತ್ತಿದೆ. ಹೀಗಾಗಿಯೇ ಪ್ರತಿ ವರ್ಷ 20 ರಿಂದ 25 ಸಾವಿರಕ್ಕೂ ಹೆಚ್ಚು ರೈತ ಫಲಾನುಭವಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ರೈತರಲ್ಲಿ ಹಿರಿತನದ ಆಧಾರದ ಮೇಲೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸಬ್ಸಿಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.............................
ಬಾಕ್ಸ್
60 ಸಾವಿರ ಹೆಕ್ಟೇರ್ ಹೆಚ್ಚಳ
ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಅಂದಾಜು 3.80 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಅದರಲ್ಲಿ ಸುಮಾರು 2.25ಲಕ್ಷ ಹೆಕ್ಟೇರ್ ಕಬ್ಬು ಬೆಳೆಯುವ ಪ್ರದೇಶವಿದೆ. ಇನ್ನೂ 1ಲಕ್ಷಕ್ಕೂ ಅಧಿಕ ನೀರಾವರಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬಳೆಯಾಗುತ್ತಿದೆ. ಎರಡು ವರ್ಷದ ಅವಧಿಯಲ್ಲಿ ಅಂದಾಜು 60 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಭೂಮಿ ನೀರಾವರಿಯಾಗಿ ಮೇಲ್ದರ್ಜೆಗೇರಿದೆ. ವರ್ಷದಿಂದ ವರ್ಷಕ್ಕೆ ನೀರಾವರಿ ಪ್ರದೇಶ ಹೆಚ್ಚಳವಾಗುತ್ತಿರುವುದು ಸರ್ಕಾರಿ ನೀರಾವರಿ ಸೌಲಭ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವು ನಿಗದಿತ ಸಮಯದಲ್ಲಿ ರೈತರಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ರೈತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.
........................................
ಬಾಕ್ಸ್
ಜಿಲ್ಲೆಯಲ್ಲಿ ಹನಿ, ತುಂತುರು ನೀರಾವರಿ ಅರ್ಜಿ ವಿವರ
ವರ್ಷ ಅರ್ಜಿಗಳು
2021 10,355
2022 22,192
2023 23,567
2024 24,756
2025 29,345
..................
ಕೋಟ್ಸ್
ವರ್ಷದಿಂದ ವರ್ಷಕ್ಕೆ ನೀರಾವರಿ ಪ್ರದೇಶ ವಿಸ್ತಾರಗೊಂಡದಂತೆ ಹನಿ, ತುಂತುರು ನೀರಾವರಿ ಸೌಲಭ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮಣ್ಣು ,ಬೆಳೆಗಳ ಸಂರಕ್ಷಣೆ ಹೀಗೆ ವಿವಿಧ ವಿಷಯ ಕುರಿತು ಕೃಷಿ ಇಲಾಖೆಯ ನಿರಂತರ ಜಾಗೃತಿ ಕಾರ್ಯಕ್ರಮದಿಂದ ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ.
- ಎಚ್.ಡಿ.ಕೋಳೇಕರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ
..............