ಯರಗಟ್ಟಿ ತಾಲೂಕಿನ ಕುರಬಗಟ್ಟಿ ಗ್ರಾಮದಲ್ಲಿ ಹತ್ತಿ ಬೆಳೆಗಳೆಗೆ ಬಕೆಟ್‌ನಿಂದ ನೀರು ಹಾಕುತ್ತಿರುವ ರೈತರಾದ ಚನ್ನಪ್ಪ ಉಳ್ಳಿಗಡ್ಡಿ, ಗಂಗಾಧರ ಉಳ್ಳಿಗಡ್ಡಿ . 
ಬೆಳಗಾವಿ

ಹತ್ತಿ ಬೆಳೆ ಉಳಿಸಿಕೊಳ್ಳಲು ಬಕೆಟ್ ಹಿಡಿದ ರೈತರು!

ಬೆಳಗಾವಿ :

ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಬಾರದ ಕಾರಣ ಒಣಗಲು ಆರಂಭಿಸಿರುವ ಬೆಳೆಗಳ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಳೆಯಾಶ್ರಿಯತ ಪ್ರದೇಶದ ರೈತರು ಬಕೆಟ್‌ಗಳಲ್ಲಿ ನೀರು ಹೊತ್ತು ತಂದು ಹತ್ತಿ ಗಿಡಗಳಿಗೆ ನೀರುಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೌದು. ಕಿತ್ತೂರು ಕರ್ನಾಟಕ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಒಣ ಭೂಮಿ ಹೊಂದಿರುವ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಗ್ರಾಮದ ರೈತರು ಮಳೆ ಬಾರದ ಹಿನ್ನೆಲೆಯಲ್ಲಿ ಹೊಲದಲ್ಲಿರುವ ಹತ್ತಿ ಗಿಡಗಳು ಒಣಗದಂತೆ ಬಿಂದಿಗೆ, ಬಕೆಟ್‌ಗಳಲ್ಲಿ ನೀರು ಹೊತ್ತು ತಂದು ಪ್ರತಿ ಹತ್ತಿ ಗಿಡಕ್ಕೆ ಒಂದೊಂದು ಬಾರಿ ಒಂದು ಲೀಟರ್‌ನಂತೆ ಮೂರು ಬಾರಿ ನೀರು ಹಾಕಿ ಬೆಳೆ ಸಂರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಇದೀಗ ನೀರಿನ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಯರಗಟ್ಟಿ,ಸವದತ್ತಿ, ರಾಮದುರ್ಗ ಸೇರಿ ವಿವಿಧ ತಾಲೂಕಿನಲ್ಲಿ ಬಿತ್ತನೆ ಮಾಡಿರುವ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎರಡು ತಿಂಗಳ ಹತ್ತಿ ಬೆಳೆದು ನಿಂತಿದೆ. ನೋಡಲು ಗಿಡಗಳು ಹಸಿರಾಗಿಯೇ ಕಾಣುತ್ತಿದ್ದರೂ, ಇದುವರೆಗೆ ಸಮರ್ಪಕವಾಗಿ ಹೂ ಬಿಟ್ಟಿಲ್ಲ, ಕಾಯಿ ಕಟ್ಟಿಲ್ಲ. ಇದರಿಂದ ಬೆಳೆ ಕೈಕೊಡುವ ಆತಂಕ ರೈತರಲ್ಲಿ ಹೆಚ್ಚಾಗಿದೆ. ಕೆಲ ಭಾಗದಲ್ಲಿ ಕೊಳವೆ ಬಾವಿ,ಟ್ಯಾಂಕರ್ ಮೂಲಕ ಬಾಡಿಗೆ ನೀರು ಪಡೆದು ಬೆಳೆಗಳಿಗೆ ನೀರುಣಿಸಿ ಸಂರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.
ಹತ್ತಿ ಬಿತ್ತನೆಗಾಗಿ ಬೀಜ, ರಸಗೊಬ್ಬರ, ಉಳುಮೆಗಾಗಿ ಬಾಡಿಗೆ ಹಾಗೂ ಕಾರ್ಮಿಕರ ಕೂಲಿ ಸೇರಿ ಎಕರೆಗೆ 25 ಸಾವಿರ ರೂ.ಖರ್ಚು ಮಾಡಿದ್ದೇವೆ.ಆದರೆ, ಮಳೆ ಕೈಕೊಟ್ಟಿರುವುದರಿಂದ ಹಾಕಿದ ಬಂಡವಾಳವೇ ಮರಳಿ ಸಿಗದ ಆತಂಕ ಕಾಡುತ್ತಿದೆ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚುವರಿ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡಿದ್ದೇವೆ. ಬಿತ್ತನೆಗಾಗಿ ಮಾಡಿರುವ ಸಾಲವನ್ನು ಮರುಪಾವತಿಸುವುದೂ ಕಷ್ಟವಾಗುವ ಪರಿಸ್ಥಿತಿ ಎದುರಾಗಿದೆ ಎಂದು ಯರಗಟ್ಟಿ ತಾಲೂಕಿನ ಕುರಬಗಟ್ಟಿ ಗ್ರಾಮದ ರೈತರಾದ ಚನ್ನಪ್ಪ ಉಳ್ಳಿಗಡ್ಡಿ, ಹೊನ್ನಪ್ಪ ಪೂಜೇರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮುಂಗಾರಿನ ಪೂರ್ವದಲ್ಲಿ ಸುರಿದ ಮಳೆಯ ನೀರಿಕ್ಷೆಯಲ್ಲಿ ಸಾವಿರಾರೂ ವೆಚ್ಚ ಮಾಡಿ ಹೆಸರು,ಶೇಂಗಾ, ಮೆಕ್ಕೆಜೋಳ, ಉದ್ದ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಿದ್ದೇವೆ. ಆದರೆ, ಜುಲೈನಲ್ಲಿ ಮಳೆಯ ಬಾರದಿರುವ ಕಾರಣ ಬಿತ್ತನೆ ಮಾಡಿರುವ ಬೆಳೆಗಳು ಕಾಯಿ, ಹೂ ಬಿಡುವ ಹಂತದಲ್ಲಿ ಒಣಗಿ ನಿಂತಿವೆ. ಭೂಮಿಯಲ್ಲಿ ನೋಡಲಿ ಬೆಳೆ ಹಸಿರಾಗಿಯೇ ಕಾಣುತ್ತಿದೆ.
ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಸರ್ಕಾರವು ಎಕರೆಗೆ 50 ಸಾವಿರ ರೂ. ವರೆಗೆ ಪರಿಹಾರ ನೀಡಬೇಕು. ಜತೆಗೆ ಮರುಬಿತ್ತನೆ ಮಾಡುವ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಬೇಕು.ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಯರಗಟ್ಟಿ ತಾಲೂಕಿನ ಇಟ್ನಾಳ ಗ್ರಾಮದ ಶಂಕ್ರಪ್ಪ ಕೊಪ್ಪದ, ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಲಾಲಸಾಭ್ ನದಾಫ್, ಚಿಪ್ಪಲಕಟ್ಟಿ ಗ್ರಾಮದ ಸುರೇಶ ಕೌಜಲಗಿ ಆಗ್ರಹಿಸಿದ್ದಾರೆ.
............
ಕೋಟ್ಸ್
ಈ ಬಾರಿ ಮಳೆ ನಿರೀಕ್ಷೆಯಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ,ಎರಡು ಎಕರೆ ಪ್ರದೇಶದಲ್ಲಿ ಹೆಸರು,ಶೇಂಗಾ ಬಿತ್ತನೆ ಮಾಡಿದ್ದೇನೆ. ಆದರೆ, ಮಳೆ ಇಲ್ಲದಿರುವ ಕಾರಣ ಹೆಸರು, ಶೇಂಗಾ ಸಂಪೂರ್ಣ ಒಣಗಿ ಹೋಗಿದೆ. ಹತ್ತಿ ಬೆಳೆ ಉಳಿಸಿಕೊಳ್ಳಲು ಬಕೆಟ್ ಮೂಲಕ ಗಿಡಗಳಿಗೆ ನೀರು ಹಾಕುತ್ತಿದ್ದೇವೆ. ಆದರೂ, ಬೆಳೆ ಕಾಯಿ ಕಟ್ಟುತ್ತಿಲ್ಲ.
-ಗಂಗಾಧರ ಉಳ್ಳಿಗಡ್ಡಿ, ಕುರಬಗಟ್ಟಿ ಗ್ರಾಮದ ಹತ್ತಿ ಬೆಳೆಗಾರ
.........