ಬಡಕುಂದ್ರಿ ಗ್ರಾಮದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಎ.ಬಿ.ಪಾಟೀಲ, ಎಚ್.ಎಲ್. ಪೂಜೇರಿ, ಸಿದ್ದು ಮಾನಗಾವಿ, ಪರಪ್ಪ ವಾಸೇದಾರ ಇತರರಿದ್ದರು.
ಹುಕ್ಕೇರಿ: ಯುವಜನರಲ್ಲಿ ಸಂಸ್ಕೃತಿ ಆಚಾರ-ವಿಚಾರಗಳ ಜತೆಗೆ ಧಾರ್ಮಿಕತೆ ಹೆಚ್ಚಿಸಲು ಹಿರಿಯರು ಗ್ರಾಮ ದೇವರ ಹೆಸರಿನಲ್ಲಿ ಜಾತ್ರಾ ಮಹೋತ್ಸವ ಆಚರಿಸುತ್ತಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕ ಉದ್ಘಾಟಿಸಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಸಂಪ್ರದಾಯದ ಅರಿವು ಈಗಿನ ಜನರಿಗೆ ಇಲ್ಲವಾಗುತ್ತಿರುವುದು ವಿಷಾದಕರ. ರಾಧಾನಾಟ, ಶ್ರೀಕೃಷ್ಣ ಪಾರಿಜಾತ ಮೊದಲಾದವು ಮರೆಯಾಗಿ ಅವುಗಳ ಸ್ಥಾನದಲ್ಲಿ ದ್ವಂದ್ವಾರ್ಥ ಇರುವ ನಾಟಕ ಜನಪ್ರಿಯವಾಗುತ್ತಿವೆ. ಇವುಗಳ ಪ್ರಭಾವವನ್ನು ತಗ್ಗಿಸಿ ಸನಾತನ ಸಂಸ್ಕೃತಿ ಉಳಿಸಲು ಯುವಜನಾಂಗ ಪ್ರಯತ್ನಿಸಬೇಕು ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಗ್ರಾಮೀಣ ಜನರಿಂದ ಹಿಂದೂ ಸಂಸ್ಕೃತಿ ಉಳಿದು ಬೆಳೆದಿದೆ. ಇಂದಿನ ಯುವಕರು ಒಳ್ಳೆಯ ಆಚಾರ-ವಿಚಾರ ರೂಢಿಸಿಕೊಳ್ಳಬೇಕು ಎಂದರು.
ವಿ.ಎಸ್.ನಿಪ್ಪಾಣಿ, ಸಿದ್ದು ಮಾನಗಾವಿ, ಬಸವರಾಜ ಗುಂಡಕಲ್ಲಿ, ಎಚ್.ಎಲ್.ಪೂಜೇರಿ, ಮಲ್ಲು ಗುಡಸಿ, ಪರಪ್ಪ ವಾಸೇದಾರ, ಪಿ.ಬಿ.ಮಗದುಮ್ಮ, ಬಸಪ್ರಭು ಪಾಟೀಲ ಇತರರಿದ್ದರು.