ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿ ಸ್ಥಗಿತಗೊಂಡಿದೆ.
ಬೆಳಗಾವಿ: ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಉದ್ದೇಶ ದಿಂದ ಆರಂಭವಾದ ಮಹತ್ವಾಕಾಂಕ್ಷೆ ಯೋಜನೆ ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ಯೋಜನೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ನಗರದ 58 ವಾರ್ಡ್‌ಗಳಲ್ಲಿನ ನಿವಾಸಿಗಳಿಗೆ ದಿನದ 24 ಗಂಟೆ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2005ರಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ನಿರಂತರ ನೀರು ಸರಬರಾಜು ಯೋಜನೆ ಪ್ರಾಯೋಗಿಕವಾಗಿ 10 ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಉಳಿದ 48 ವಾರ್ಡ್‌ಗಳಿಗೆ 24ಗಿ7 ಯೋಜನೆ ವಿಸ್ತರಿಸಲು 2018ರಿಂದಲೇ ಚಾಲನೆ ನೀಡಲಾಗಿದ್ದು, ಇಲ್ಲಿಯವರೆಗೂ ಅರ್ಧ ಕಾಮಗಾರಿ ಕೂಡ ಆಗಿಲ್ಲ. 2025 ಡಿಸೆಂಬರ್ ಒಳಗಾಗಿ ನಾಗರಿಕರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕಾಗಿತ್ತು. ಆದರೆ 2026ರ ಡಿಸೆಂಬರ್‌ವರೆಗೆ ಕಾಲವಕಾಶ ಕೋರಿ ಎಲ್‌ಆ್ಯಂಡ್‌ಟಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದಿದೆ.ನಗರ ಪ್ರದೇಶದ ವ್ಯಾಪ್ತಿಯಲ್ಲಿ 5.88 ಲಕ್ಷ ಜನರಿಗೆ, 256 ಹೋಟೆಲ್, 325ಕ್ಕೂ ಅಧಿಕ ಸಣ್ಣ, ಅತಿ ಸಣ್ಣ ಹಾಗೂ ಬೃಹತ್ ಕೈಗಾರಿಕೆ ಸೇರಿ ವಾಣಿಜ್ಯ ಚಟುವಟಿಕೆಗಳಿಗೆ ನಿತ್ಯ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯ ಮತ್ತು ರಕ್ಕಸಕೊಪ್ಪ ಜಲಾಶದಿಂದ 108 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಕುಡಿಯಲು 75 ಎಂಎಲ್‌ಡಿಯಷ್ಟು ನೀರು ಬಳಕೆಯಾಗುತ್ತಿದೆ. ಎಲ್‌ಆ್ಯಂಡ್‌ಟಿ ಕಂಪನಿ ಕೈಗೊಂಡಿರುವ ಕಾಮಗಾರಿಯಿಂದ ನಗರಕ್ಕೆ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.
ಈಗಾಗಲೇ ನಗರದಲ್ಲಿ 24ಗಿ7 ಕುಡಿಯುವ ನೀರು ಯೋಜನೆಯ 900 ಕಿಮೀ ಉದ್ದದ ಪೈಪ್‌ಲೈನ್ ಪೈಕಿ 620 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. 80 ಸಾವಿರ ಪೈಕಿ 24 ಸಾವಿರ ಮನೆಗಳಿಗೆ ಮಾತ್ರ ನಳ ಸಂಪರ್ಕ ಕಲ್ಪಿಸಿದೆ. ನೂರಾರು ಕೋಟಿ ರೂ. ಪಾವತಿಯಾಗಿದ್ದರೂ ಪೈಪ್‌ಲೈನ್ ಅಳವಡಿಕೆ, ಸಂಪರ್ಕ ಕಾಮಗಾರಿ ಮತ್ತು ರಸ್ತೆ ಪುನರ್‌ಸ್ಥಾಪನೆ ಕೆಲಸಗಳು ಅರ್ಧಕ್ಕೇ ನಿಂತಿವೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜನತೆಗೆ 24/7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದ್ದು, ಬಾಕಿ ಶೇ.40ರಷ್ಟು ಕಾಮಗಾರಿ 2026 ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲಾಗುವುದು. ದೊಡ್ಡ ಪೈಪಲೈನ್, ಟ್ಯಾಂಕರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮನೆಗಳಿಗೆ ನಳ ಸಂಪರ್ಕದ ಪೈಪಲೈನ್ ಕಾಮಗಾರಿ ಬಾಕಿ ಉಳಿದುಕೊಂಡಿದೆ.
ನಗರದ ತುಂಬೆಲ್ಲ ಕುಡಿಯುವ ನೀರಿನ ಯೋಜನೆಗಾಗಿ ಎಲ್‌ಆ್ಯಂಡ್‌ಟಿ ಕಂಪನಿ ಅಗೆದಿರುವ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ. ಕಾಮಗಾರಿ ವೇಗ ಹೆಚ್ಚಿಸುವಂತೆ ಎಚ್ಚರಿಕೆ ನೀಡಲಾಗಿದೆ.