ನಿಪ್ಪಾಣಿಯ ವಿಎಸ್‌ಎಂ ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನಕ್ಕೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಚಾಲನೆ ನೀಡಿದರು. ಸಮೀರ್ ಬಾಗೇವಾಡಿ, ಹರಿಶ್ಚಂದ್ರ ಶಾಂಡಗೆ, ರಾವಸಾಹೇಬ ಪಾಟೀಲ ಇತರರಿದ್ದರು.
ನಿಪ್ಪಾಣಿ: ಗಡಿಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಸ್ಥಳಕ್ಕೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ವಿಎಸ್‌ಎಂನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವಿದ್ಯಾ ಸಂವರ್ಧಕ ಮಂಡಳದ ಸಂಚಾಲಕ ರಾವಸಾಹೇಬ ಪಾಟೀಲ ಹೇಳಿದರು.
ವಿಎಸ್‌ಎಂ ಜಿ.ಐ.ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣೆ
ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿಕೊಡಲು ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಿಇಒ ಡಾ.ಸಿದ್ಧಗೌಡ ಪಾಟೀಲ ಮಾತನಾಡಿ, 66 ವರ್ಷಗಳಿಂದ ವಿಎಸ್‌ಎಂದಿಂದ ವಿದ್ಯಾದಾನ ಮಾಡುತ್ತಿದ್ದು, ಗುಣಮಟ್ಟದ ಶಿಕ್ಷಣದ ಫಲವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಉಭಯ ರಾಜ್ಯಗಳಲ್ಲಿ ಮಂಡಳ ಹೆಸರುವಾಸಿಯಾಗಿದೆ ಎಂದರು. ಪ್ರೊ.ಕೈಲಾಸ ಪಠಾಡೆ ಮಾತನಾಡಿ, ತಂದೆ-ತಾಯಿ, ಶಿಕ್ಷಕರನ್ನು ಗೌರವಿಸುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು. ಭಾರತೀಯ ಸೇನೆಗೆ ಆಯ್ಕೆಗೊಂಡ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ಮೇಘಾ ತಳವಾರ, ವಿವಿಧ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಪ್ರೌಢಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ, ಸರೋಜನಿ ಸಮಾಜೆ, ಸಚಿನ ಹಾಲಪ್ಪನವರ, ಪ್ರವೀಣ ಪಾಟೀಲ, ಸಮ್ಮೇದ ಚೌಗುಲೆ ಇತರರಿದ್ದರು.