ಬೆಳಗಾವಿ ನಗರದಲ್ಲಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ರಾಮ ಭಂಡಾರೆ, ಭರತ ದೇಶಪಾಂಡೆ, ವಿಲಾಸ ಬಾದಾಮಿ, ವಿಲಾಸ ಜೋಶಿ ಇತರರಿದ್ದರು.
ಬೆಳಗಾವಿ: ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಜತೆಗೆ ನಿಲ್ಲುವುದರೊಂದಿಗೆ ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುವ ಸಂಘಟನೆಯಾಗಿ ಜಿಲ್ಲಾ ಬ್ರಾಹ್ಮಣ ಟ್ರಸ್ಟ್ ರೂಪಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಹೇಳಿದರು. ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭವಿಷ್ಯ ರೂಪಿಸುವ ಶಕ್ತಿ ಹೊಂದಿರುವ ಶಿಕ್ಷಣ ಆರ್ಥಿಕ ಸಮಸ್ಯೆಯಿಂದ ಮೊಟಕುಗೊಳ್ಳಬಾರದು ಎಂದರು. ಸಮುದಾಯದಲ್ಲಿ ಪ್ರತಿಭೆ, ಸಂಪನ್ಮೂಲ ಮತ್ತು ಸೇವಾ ಮನೋಭಾವಕ್ಕೆ ಕೊರತೆಯಿಲ್ಲ. ಆದರೆ, ಇವೆಲ್ಲವನ್ನೂ ಒಂದೇ ವೇದಿಕೆಯಡಿ ತರುವ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಸದಸ್ಯತ್ವ ಎನ್ನುವುದು ಕೇವಲ ಹೆಸರು ನೋಂದಾಯಿಸುವ ಪ್ರಕ್ರಿಯೆಯಲ್ಲ. ಅದು ಅಭಿವೃದ್ಧಿಯ ಜವಾಬ್ದಾರಿಯಲ್ಲಿ ಪಾಲುದಾರರಾಗುವ ಸಂಕಲ್ಪವಾಗಿದೆ ಎಂದರು. ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ ಮಾತನಾಡಿ, ಬ್ರಾಹ್ಮಣ ಸಮುದಾಯದ ದುರ್ಬಲ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದೇ ಟ್ರಸ್ಟ್ ಮುಖ್ಯ ಉದ್ದೇಶ ಎಂದರು. ಕಾರ್ಯದರ್ಶಿ ವಿಲಾಸ ಬಾದಾಮಿ, ಜಂಟಿ ಕಾರ್ಯದರ್ಶಿ ವಿಲಾಸ ಜೋಶಿ, ದಿವಾಕರ ದೇಶಪಾಂಡೆ, ಕೋಶಾಧ್ಯಕ್ಷ ರಮೇಶ ಕುಲಕರ್ಣಿ ಇತರರಿದ್ದರು.