ಹುಕ್ಕೇರಿ ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ತಾಲೂಕು ಕೃಷಿಕ ಸಮಾಜದ ಸದಸ್ಯರು ಮನವಿ ಸಲ್ಲಿಸಿದರು. ಬಿ.ಕೆ.ಮಗೆಣ್ಣವರ, ಸಂಜಯ ಹುದಲಿಮಠ, ಅಶೋಕ ನಾಯಿಕ ಇತರರಿದ್ದರು.
ರೈತರ ಸಮಸ್ಯೆ ಪರಿಹರಿಸಬೇಕು, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಹುಕ್ಕೇರಿ ತಾಲೂಕು ಕೃಷಿಕ ಸಮಾಜದ ವತಿಯಿಂದ ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ಮಗೆಣ್ಣವರ ಮಾತನಾಡಿ, ಸರ್ಕಾರ ರಿಯಾಯಿತಿ ದರದಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಮೇವು ಕತ್ತರಿಸುವ ಯಂತ್ರ, ಬೀಜ ಸಂಸ್ಕರಣೆಗೆ ಪೆಟ್ರೋಲ್ ಮತ್ತು ಬ್ಯಾಟರಿಚಾಲಿತ ಪಂಪ್ ಕೊಡುವ ಪ್ರಕ್ರಿಯೆ ಆರಂಭಿಸಬೇಕು. ಸೌರಚಾಲಿತ ಕೃಷಿ ಪಂಪಸೆಟ್ ಅನುಷ್ಠಾನಗೊಳಿಸಬೇಕು. ಯುವರೈತರು ಸ್ವಯಂ ಉದ್ಯೋಗ ಕೈಗೊಳ್ಳಲು ಸಬ್ಸಿಡಿ ಸಾಲ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. 2 ವರ್ಷಗಳಿಂದ ಸ್ಪ್ರಿಂಕ್ಲರ್, ಹನಿ ನೀರಾವರಿ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು 10 ರೂ.ಗೆ ಹೆಚ್ಚಿಸಬೇಕು. ತಾಲೂಕು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ರೈತರಿಗೆ ತ್ವರಿತ ಸೇವೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಉಪಾಧ್ಯಕ್ಷ ಸಂಜಯ ಹುದಲಿಮಠ, ಜಿಲ್ಲಾ ಪ್ರತಿನಿಧಿ ಸತ್ಯಪ್ಪ ನಾಯಿಕ, ಸಮಿತಿ ಸದಸ್ಯರಾದ ಅಶೋಕ ನಾಯಿಕ, ಪರಪ್ಪ ಮಗದುಮ್ಮ, ಸಂಜಯ ಕಂಠಿ, ದಸ್ತಗೀರ್ ತಹಸೀಲ್ದಾರ್, ಮಯೂರ ಗಸ್ತಿ, ಕೆಂಪಣ್ಣ ಸನದಿ, ಅಪ್ಪಣ್ಣ ಬಡಿಗೇರ, ಶಿವು ಬಿಲಕಾರ, ಭೀಮಪ್ಪ ಘಸ್ತಿ ಇತರರಿದ್ದರು.