ಶಮನೇವಾಡಿಯ ಗುಣಧರ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಗುಣಧರನಂದಿ ಮುನಿ ಮಹಾರಾಜರು ಮಾತನಾಡಿದರು. ಜಯಕುಮಾರ ಖೋತ, ಕುಮಾರ ಮಗದುಮ್ಮ, ತಾತ್ಯಾಸಾಹೇಬ ಖೋತ, ಬಾಹುಬಲಿ ಶಿರಗುಪ್ಪಿ ಇದ್ದರು.
- ಗುಣಧರನಂದಿ ಮುನಿ ಮಹಾರಾಜರು ಮಾಹಿತಿ
- ವಿವಿಧ ಧಾರ್ಮಿಕ ಕಾರ್ಯಕ್ರಮ ನಾಳೆಯಿಂದ
ಚಿಕ್ಕೋಡಿ: ಬಡ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನಾಥ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶದಿಂದ ತಾಲೂಕಿನ ಶಮನೇವಾಡಿಯ ಗುಣಧರ ತೀರ್ಥದಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮುನಿ ಮಹಾರಾಜರು ತಿಳಿಸಿದರು.
ತಾಲೂಕಿನ ಶಮನೇವಾಡಿ ಗುಣಧರ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಮಹತ್ವದ್ದಾಗಿದೆ. ಎಸ್‌ಡಿಎಂ ಜೈನಮಠ ಟ್ರಸ್ಟ್ ವತಿಯಿಂದ ಬಡ ಹಾಗೂ ಅನಾಥ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲಾಗುವುದು. ಶಿಕ್ಷಣ, ಸಂಸ್ಕೃತಿ, ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಮೂರು ದಿನ ವಿವಿಧ ಕಾರ್ಯಕ್ರಮ: ಮೇ ೨೪, ೨೫ ಮತ್ತು ೨೬ರಂದು ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮ ಕುರಿತು ಶ್ರೀಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಭಾರತದಲ್ಲಿ ಮೊದಲು ಬಾರಿಗೆ ೧೫೧ ಅಡಿ ಎತ್ತರದ ಭಗವಾನ ಶ್ರೀ ಪಾರ್ಶ್ವನಾಥರ ಬೃಹತ್ ಪಾಷಾನ ವಿಗ್ರಹವನ್ನು ಶಮನೆವಾಡಿ ಸಮೀಪದ ನೇಜ ಬಳಿಯ ಗುಣಧರ ತೀರ್ಥದಲ್ಲಿ ಪ್ರತಿಷ್ಠಾಪನೆಯ, ಭೂಮಿ ಶುದ್ದಿಕರಣ ಜರುಗಲಿದೆ. ಮೇ ೨೪ರಂದು ಬೆಳಗ್ಗೆ ಅಭಿಷೇಕ, ನಿತ್ಯ ಪೂಜೆ, ಮಧ್ಯಾಹ್ನ ವಾಸ್ತುವಿಧಾನ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅತಿಥಿಗಳಾಗಿ ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಗಣೇಶ ಹುಕೇರಿ, ಶಶಿಕಲಾ ಜೊಲ್ಲೆ ಆಗಮಿಸಲಿದ್ದಾರೆ.
ಮೇ ೨೫ರಂದು ಅಭಿಷೇಕ,ಪೂಜೆ, ಭಗವಾನ ಪಾರ್ಶ್ವನಾಥ ವಿಧಾನ, ಸರಸ್ವತಿ ಮೂರ್ತಿ ಶುದ್ಧೀಕರಣ ಸಮಾರಂಭ ಜರುಗಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ, ಉತ್ತಮ ಪಾಟೀಲ ಭಾಗಿಯಾಗಲಿದ್ದಾರೆ. ಮೇ ೨೬ರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಜಿ.ಎಂ.ಇಂಜಿನಿಯರಿಂಗ್ ಕಾಲೇಜು ಉದ್ಘಾಟಿಸುವರು. ಆರ್‌ಎಸ್‌ಎಸ್ ಪ್ರಮುಖ ಬಿ.ಎಲ್.ಸಂತೋಷ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ವಿಶ್ವಶಾಂತಿಗಾಗಿ ಮಹಾಯಜ್ಞ: ಜಗತ್ತಿನಲ್ಲಿ ಉಂಟಾಗುತ್ತಿರುವ ಸಂಘರ್ಷಗಳ ಅಂತ್ಯಗೊಂಡು ಶಾಂತಿ ನೆಲೆಸಲಿ ಎಂಬ ಆಶಯದೊಂದಿದೆ ಮೇ ೨೫ರಂದು ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ತಲೆದೂರಿರುವ ಆರ್ಥಿಕ ಸಂಕಷ್ಟ ದೂರವಾಗುವಂತೆ ಮತ್ತು ರಾಷ್ಟçದ ಶಕ್ತಿ ವೃದ್ಧಿಸುವಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಕುಮಾರ ಖೋತ, ಕುಮಾರ ಮಗದುಮ್ಮ, ತಾತ್ಯಾಸಾಹೇಬ ಖೋತ, ಬಾಹುಬಲಿ ಶಿರಗುಪ್ಪಿ, ಬಾಬಣ್ಣ ಖೋತ ಇದ್ದರು.