ಅಥಣಿ ಮೋಟಗಿಮಠದ ಗುರುಬಸವೇಶ್ವರ ವಿದ್ಯಾವಿಕಾಸ ಸಂಸ್ಥೆಯ ಅನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಭುಚನ್ನಬಸವ ಸ್ವಾಮೀಜಿ, ಗಜಾನನ ಮಂಗಸೂಳಿ, ಕೆ.ಎ.ವನಜೋಳ, ಮುರುಗೇಶ ಬಾನಿ, ಅಶೋಕ ಹೊಸೂರ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಲಿ

ಅಥಣಿ: ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ನೀಡುವುದು ಸಂವಿಧಾನದ ಆಶಯ. ಅದರಂತೆ ಅನಿಕೇತನ ಶಾಲೆಯಲ್ಲಿ ಕಲಿಯುತ್ತಿರುವ ಬಡ ಹಾಗೂ ಕೂಲಿಕಾರ್ಮಿಕರ ಮಕ್ಕಳ ಬದುಕಿಗೆ ಗುರುಬಸವೇಶ್ವರ ವಿದ್ಯಾವಿಕಾಸ ಸಂಸ್ಥೆ ಆಸರೆಯಾಗಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶಂಕರನಗರದಲ್ಲಿರುವ ಅನಿಕೇತನ ಶಾಲೆಯ ೨೫ನೇ ವರ್ಷದ ಬೆಳ್ಳಿ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು. ಸಂಸ್ಥೆ ನಿರ್ದೇಶಕ ಗಜಾನನ ಮಂಗಸೂಳಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯವಾಗಿದ್ದು, ಮೊಬೈಲ್, ಟಿವಿಯಿಂದ ದೂರವಿರುವಂತೆ ಪಾಲಕರು ನೋಡಿಕೊಳ್ಳಬೇಕು. ಅನಿಕೇತನ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಸಂಗತಿ ಎಂದರು.
ನಿರ್ದೇಶಕ ಸಂಗಣ್ಣ ಗೂಗವಾಡ ಮಾತನಾಡಿ, ಯುವಕರ ಸಂಘದಿಂದ ಆರಂಭವಾದ ಶಾಲೆ ೨೫ ವಸಂತ ಕಂಡಿರುವುದು ಹೆಮ್ಮೆಯ ಸಂಗತಿ. ಇದರ ಸಂಪೂರ್ಣ ಜವಾಬ್ದಾರಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ವಹಿಸಿಕೊಂಡು ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ನಾಡಿಗೆ ಮಾದರಿಯಾಗಿದೆ ಎಂದರು.
ಕಳೆದ ೨೫ವರ್ಷ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕರು, ಆಡಳಿತಾಧಿಕಾರಿಗಳಾಗಿದ್ದ ರಮೇಶ ಪಾಟೀಲ, ಶಿವರಾಜ ಗಾಲಿ, ಮಹಾಂತೇಶ ಹಿರೇಮಠ, ಗಜಾನನ ಗಸ್ತಿ ಅವರನ್ನು ಸನ್ಮಾನಿಸಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಕೆ.ಎ.ವನಜೋಳ, ಅಶೋಕ ಹೊಸೂರ, ಶಶಿಕಾಂತ ಹುಲಕುಂದ, ಶಿವಾನಂದ ಬುರ್ಲಿ, ಕಾರ್ಯದರ್ಶಿ ಮುರುಗೇಶ ಬಾನಿ ಇತರರಿದ್ದರು.