ಸವದತ್ತಿ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರಗೆ ಮನವಿ ಸಲ್ಲಿಸಿದರು. ಶಿವಾನಂದ ಸರದಾರ, ಸುರೇಶ ಸಂಪಗಾವಿ, ಜಗದೀಶ ಅಗಡಿ, ಮಲ್ಲಪ್ಪ ಹುಂಡನವರ ಇತರರಿದ್ದರು. 
ಬೆಳಗಾವಿ

ರಸಗೊಬ್ಬರ ಕೊರತೆ ನೀಗಿಸಿ

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ, ಹಸಿರು ಸೇನೆ ಕೋರಿಕೆ
  • ಲಿಂಕ್ ಹೆಸರಲ್ಲಿ ಹಗಲು ದರೋಡೆ
ಸವದತ್ತಿ: ರಸಗೊಬ್ಬರ ಕೊರತೆ, ಗೊಬ್ಬರ ವಿತರಣೆಯಲ್ಲಿನ ಲಿಂಕ್ ಪದ್ಧತಿ ಹಾಗೂ ಹೆಚ್ಚುವರಿ ದರ ವಸೂಲಿ ಸೇರಿದಂತೆ ವಿವಿಧ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ
ಮುಖಂಡರು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರಗೆ ಸೋಮವಾರ ಮನವಿ ಸಲ್ಲಿಸಿದರು.
ರೈತ ಮುಖಂಡ ಶಿವಾನಂದ ಸರದಾರ ಮಾತನಾಡಿ, ರೈತರ ಬೇಡಿಕೆಗೆ ಅನುಗುಣವಾಗಿ ಡಿಎಪಿ, ಯೂರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಸಮರ್ಪಕ ಪೂರೈಕೆ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ಕಾಂಪ್ಲೆಕ್ಸ್ ಗೊಬ್ಬರದ ಚೀಲಕ್ಕೆ ಹೆಚ್ಚುವರಿಯಾಗಿ 300 ರೂ. ಹಣ ವಸೂಲಿ ಮಾಡಲಾಗುತ್ತಿದೆ. ಅಗತ್ಯವಿಲ್ಲದ ಇತರ ಗೊಬ್ಬರ ಕಡ್ಡಾಯವಾಗಿ ಖರೀದಿಸುವಂತೆ ಲಿಂಕ್ ವ್ಯವಸ್ಥೆ ಜಾರಿಗೊಳಿಸಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರೈತ ಮುಖಂಡ ಸುರೇಶ ಸಂಪಗಾವಿ ಮಾತನಾಡಿ, ಮುಂಗಾರು ಬಿತ್ತನೆ ಆರಂಭವಾಗುತ್ತಿರುವ ಸಂದರ್ಭದಲ್ಲೇ ಗೊಬ್ಬರ ಕೊರತೆ ಎದುರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬಿತ್ತನೆ ಹಂಗಾಮು ಪೂರ್ಣಗೊಳ್ಳುವವರೆಗೆ ಲಿಂಕ್ ಪದ್ಧತಿ ಸ್ಥಗಿತಗೊಳಿಸಿ, ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ರೈತರ ಬೇಡಿಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಬಿತ್ತನೆ ಹಂಗಾಮಿನಲ್ಲಿ ಗೊಬ್ಬರ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಪ್ರಮುಖ ಜಗದೀಶ ಅಗಡಿ ಮಾತನಾಡಿದರು. ಕೃಷಿ ಇಲಾಖೆ ಎಡಿ ಎಸ್.ವಿ.ಪಾಟೀಲ, ಮಲ್ಲಪ್ಪ ಹುಂಡನವರ, ವಸಂತಗೌಡ ಪಾಟೀಲ, ಎಂ.ಎಸ್.ಕರಿಗೌಡ್ರ, ಅಜ್ಜಪ್ಪ ಹಳ್ಳದ, ಸುರೇಶ ಅಂಗಡಿ, ಶ್ರೀಶೈಲ ಕರಡಿ, ಪ್ರಕಾಶ ತಳವಾರ, ಆತ್ಮಾನಂದ ಬಾಳೇಕುಂದರಗಿ, ಮಹಾಂತೇಶ ಚರಂತಿಮಠ, ಚನ್ನಪ್ಪ ಹರ್ಲಾಪುರ, ಪಡದಯ್ಯ ಹಿರೇಮಠ, ಮಂಜುನಾಥ ಕುರಿ, ರಾಜಕುಮಾರ ಮಾಳಪ್ಪನವರ, ಮಂಜು ಭೀಮನಗೌಡ್ರ ಇತರರಿದ್ದರು.