ನವದೆಹಲಿ: ಬೆಳಗಾವಿ ನಗರದ ಸಂಚಾರ ದಟ್ಟಣೆ ಹಾಗೂ ರೈಲ್ವೆ ಗೇಟ್‌ಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರದ ಹೃದಯಭಾಗದಲ್ಲಿ 9 ಕಿ.ಮೀ. ಉದ್ದದ ಎಲಿವೇಟೆಡ್ ರೈಲ್ವೆ ಮಾರ್ಗ ನಿರ್ಮಿಸುವಂತೆ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ ಒತ್ತಾಯಿಸಿದರು.
ಸಂಸತ್ತಿನ ಅಧಿವೇಶನ ರಾಜ್ಯಸಭೆಯಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದ ಅವರು, ವೈಯಾಡಕ್ಟ್‌ಗಳ ಮೇಲೆ ಎಲಿವೇಟೆಡ ರೈಲ್ವೆ ಟ್ರ್ಯಾಕ್ ನಿರ್ಮಿಸುವ ಮೂಲಕ ನಗರದ ವಿವಿಧೆಡೆ ಇರುವ ಲೆವೆಲ್ ಕ್ರಾಸಿಂಗ್‌ಗಳಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಯನ್ನು ನಿವಾರಿಸಬಹುದು.
ರೈಲ್ವೆ ಗೇಟ್‌ಗಳಲ್ಲಿ ವಾಹನಗಳ ಸರದಿ, ತುರ್ತು ಸೇವೆಗಳಿಗೆ ಅಡ್ಡಿ, ಸಾರ್ವಜನಿಕರ ಸಮಯದ ನಷ್ಟ ಸೇರಿದಂತೆ ಹಲವು ಸಮಸ್ಯೆಗಳಿಗೆ ಈ ಯೋಜನೆ ಪರಿಣಾಮಕಾರಿ ಪರಿಹಾರವಾಗಲಿದೆ. ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗಳ ಸಂಚಾರ ಸುಗಮವಾಗುವುದರ ಜತೆಗೆ, ಭಾರೀ ವಾಹನಗಳ ಸಂಚಾರ ಮತ್ತು ನಗರದ ಸಂಪರ್ಕ ವ್ಯವಸ್ಥೆಯೂ ಮತ್ತಷ್ಟು ಸುಧಾರಿಸಲಿದೆ ಎಂದು ಅವರು ವಿವರಿಸಿದರು.
ನಗರದ ವಾಣಿಜ್ಯ ಪ್ರದೇಶಗಳಿಗೆ ಯಾವುದೇ ತೊಂದರೆಯಾಗದಂತೆ ಭವಿಷ್ಯದ ಬೆಳಗಾವಿಯ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಯೋಜನೆಯನ್ನು ರೂಪಿಸಬಹುದು. ಕುರಕ್ಷೇತ್ರ ಮತ್ತು ಕಾನ್ಪುರದಲ್ಲಿ ಜಾರಿಗೊಳ್ಳುತ್ತಿರುವ ಎಲಿವೇಟೆಡ್ ರೈಲ್ವೆ ಯೋಜನೆಗಳ ಮಾದರಿಯಲ್ಲಿ ಬೆಳಗಾವಿಯಲ್ಲೂ ವೈಜ್ಞಾನಿಕ ಹಾಗೂ ಸುಸ್ಥಿರ ಪರಿಹಾರ ಕಲ್ಪಿಸುವ ಅಗತ್ಯವಿದೆ.
ಬೆಳಗಾವಿಯ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ಬೇಕು. ಆಧುನಿಕ ಹಾಗೂ ಸಂಚಾರ ದಟ್ಟಣೆ ಮುಕ್ತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ