ಬೆಳಗಾವಿಯಲ್ಲಿ ಮುರುಘೇಂದ್ರಗೌಡ ಎಸ್​. ಪಾಟೀಲ ಟ್ರೋಫಿ ಕ್ರಿಕೆಟ್​ ಮ್ಯಾಚ್​ಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು. ಗುರುಸಿದ್ಧ ಸ್ವಾಮೀಜಿ, ಮುರುಘೇಂದ್ರಗೌಡ ಪಾಟೀಲ, ಅವಿನಾಶ ಪೋತದಾರ, ಯಲ್ಲಪ್ಪ ಕುರುಬರ ಇತರರಿದ್ದಾರೆ. 
ಬೆಳಗಾವಿ

ಬೆಳಗಾವಿಗೆ ಐಪಿಎಲ್​ ಮ್ಯಾಚ್​ ತರಲು ಪ್ರಯತ್ನ

ಬೆಳಗಾವಿ: ಐಪಿಎಲ್​ನಂತಹ ಮ್ಯಾಚ್​ಗಳು ಬೆಳಗಾವಿಯಲ್ಲೂ ನಡೆಯುವ ರೀತಿಯಲ್ಲಿ ಇಲ್ಲಿನ ಸ್ಟೇಡಿಯಂ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿಯೇ ಏಷಿಯನ್​ ಕ್ರಿಕೆಟ್​ ಕೌನ್ಸಿಲ್​ ಸದಸ್ಯ ಆಶೀಷ ಶೇಲಾ ಅವರಿಗೆ ಮನವಿ ಮಾಡಿದ್ದು, ಐಪಿಎಲ್​ ಮ್ಯಾಚ್​ ಬರುವವರೆಗೂ ಪ್ರಯತ್ನ ಮುಂದುವರಿಯುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಸರ್ದಾರ ಮೈದಾನದಲ್ಲಿ ಎಂಪಿ ಫೌಂಡೇಷನ್​ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಪಟುಗಳನ್ನು ಒಳಗೊಂಡಿರುವ "ಆಲ್​ ಇಂಡಿಯಾ ಓಪನ್​ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿ&26' ಶ್ರೀ ಮುರುಘೇಂದ್ರಗೌಡ ಎಸ್​.ಪಾಟೀಲ ಟ್ರೋಫಿಯ ಮೊದಲ ಸರಣಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಪಂದ್ಯಾವಳಿಯ ಆಯೋಜಕ ಪ್ರತಿಷ್ಠಾನದ ಸಂಸ್ಥಾಪಕ ಮುರುಘೇಂದ್ರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಫೆ.22ರವರೆಗೆ ನಡೆಯುವ ಟೂರ್ನಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಉತ್ತರ ಪ್ರದೇಶ, ದೆಹಲಿ, ಗೋವಾದ ತಂಡಗಳು ಭಾಗಹಿಸುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಪಂದ್ಯಗಳಲ್ಲಿ ರಣಜಿ, ಐಪಿಎಲ್​ನಲ್ಲಿ ಆಡಿರುವ ಕ್ರಿಕೆಟಿಗರು ಒಂದೊಂದು ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಥಮ ತಂಡಕ್ಕೆ 5,27,127 ರೂ., ದ್ವೀತಿಯ ಸ್ಥಾನಕ್ಕೆ 2,51,127 ರೂ. ನಗದು ಬಹುಮಾನ, ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಬೈಕ್​ ಸೇರಿ ವೈಯಕ್ತಿಕ ವಿಭಾಗದಲ್ಲಿ ವಿವಿಧ ಬಹುಮಾನಗಳಿವೆ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅವಿನಾಶ ಪೋತದಾರ, ಯಲ್ಲಪ್ಪ ಕುರುಬರ, ರವಿರಾಜ ಪಾಟೀಲ, ಶಿವಾಜಿ ಶಹಾಪುರಕರ, ದಾದಾಗೌಡ ಬಿರಾದಾರ, ಮಲ್ಲಪ್ಪ ಪಾಟೀಲ, ಸಿದ್ದಪ್ಪ ಸಾಬಣ್ಣವರ, ಎಫ್​.ಎಸ್​.ಸಿದ್ದನಗೌಡ, ಮಂಜುನಾಥ ಪಮ್ಮಾರ, ಹನುಮಂತ ಉಪ್ಪರ ಇತರರಿದ್ದರು. ತೇಜಸ್ವಿನಿ ತಮೋಚೆ ನಿರೂಪಿಸಿದರು.