ಬೆಳಗಾವಿ ನಗರದ ಎಪಿಎಂಸಿಗೆ ಕೃಷಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಾಪಾರಸ್ಥರು ಪರಸ್ಪರ ವಾಗ್ವಾದ ನಡೆಸಿದರು.
ಬೆಳಗಾವಿ: ನಗರದ ಎಪಿಎಂಸಿಗೆ ಕೃಷಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದ ವೇಳೆ ಅಲ್ಲಿನ ವ್ಯಾಪಾರಸ್ಥರು ವಾಗ್ವಾದಕ್ಕಿಳಿದ ಘಟನೆ ಭಾನುವಾರ ನಡೆದಿದೆ. ಎಪಿಎಂಸಿಯಲ್ಲಿರುವ ವ್ಯಾಪಾರ ಮಳಿಗೆಗಳ ಹಂಚಿಕೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ತಳ್ಳಾಟ-ನೂಕಾಟ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರು ಮತ್ತು ಪೊಲೀಸರು ಗದರಿಸುತ್ತಿದ್ದಂತೆ ಸುಮ್ಮನಾದರು. ಸರ್ಕಾರ ಗಾಂಧಿ ನಗರದಲ್ಲಿದ್ದ ಖಾಸಗಿ ಜೈ ಕಿಸಾನ್ ಮಾರುಕಟ್ಟೆ ಸ್ಥಗಿತಗೊಳಿಸಿದ ಪರಿಣಾಮ ಅಲ್ಲಿನ ವ್ಯಾಪಾರಸ್ಥರು ಎಪಿಎಂಸಿಯಲ್ಲಿ ವಹಿವಾಟು ಮಾಡಲು ಮಳಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ಜೈ ಕಿಸಾನ್ ಮಾರುಕಟ್ಟೆ ವ್ಯಾಪಾರಸ್ಥರು ಪ್ರತ್ಯೇಕ ವಹಿವಾಟು ನಡೆಸುತ್ತಿದ್ದು, ಒಂದೇ ಸೂರಿನಡಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಸ್ಥಳೀಯ ಶಾಸಕರು, ಸಚಿವರ ಜತೆ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಮಾರುಕಟ್ಟೆ ವಿಚಾರವಾಗಿ ವಾಗ್ವಾದ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಶೀಘ್ರವೇ ವರ್ತಕರ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು.