ಬೆಳಗಾವಿಯಲ್ಲಿ ಶನಿವಾರ ನಶಾಮುಕ್ತ ಅಭಿಯಾನ ಪ್ರಯುಕ್ತ ಹಮ್ಮಿಕೊಂಡಿದ್ದ ವಾಕ್‌ಥಾನ್‌ಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.
ಬೆಳಗಾವಿ : ಮಾದಕ ವಸ್ತುಗಳ ವ್ಯಸನ ಶಾಲೆಗಳಿಗೂ ಪ್ರವೇಶಿಸಿದೆ. ಚಿಕ್ಕವರೂ ವ್ಯಸನಿಗಳಾಗುತ್ತಿದ್ದು, ಸರ್ಕಾರ ಮತ್ತು ಪೊಲೀಸರಿಂದ ಮಾತ್ರ ಸಂಪೂರ್ಣ ನಿರ್ಮೂಲನೆ ಕಷ್ಟ. ಜನರೂ ಕೈ ಜೋಡಿಸಿದಾಗ ರಾಜ್ಯವನ್ನು ಡ್ರಗ್ಸ್ ಮಾಫಿಯಾದಿಂದ ಕಾಪಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂಘ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ದಿಶಾಬೋಧ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ ಹಾಗೂ ನಶಾಮುಕ್ತ ಭಾರತ-ನಶಾಮುಕ್ತ ಕರ್ನಾಟಕ-ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗದಾನ ಜಾಗೃತಿ ಅಭಿಯಾನದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ವಾಕ್‌ಥಾನ್‌ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ತಿನ್ನುವ ಪದಾರ್ಥಗಳಲ್ಲೂ ನಶೆ ವಸ್ತು ಸೇರುತ್ತಿವೆ. ಅದನ್ನೇ ತಿನ್ನುವುದು ಚಟವಗಾಲಿ ಎಂಬ ಕಾರಣಕ್ಕೆ ಸೇರಿಸುತ್ತಿದ್ದಾರೆ. ಸರ್ಕಾರದಿಂದ ಪರಶೀಲನೆ ಮಾಡಿಸಿದಾಗ ಪತ್ತೆಯಾಗಿದೆ. ಇವತ್ತು ಮೆಕ್ಸಿಕೋದಂತಹ ದೇಶದಲ್ಲಿ ಸರ್ಕಾರ ಮತ್ತು ಡ್ರಗ್ಸ್ ಮಾಫಿಯಾ ಮಧ್ಯೆಯೇ ಸಮರ ನಡೆದಿದೆ. ಇಡೀ ಜಗತ್ತಿನ ಹಳ್ಳಿ ಹಳ್ಳಿಗೆ ಡ್ರಗ್ಸ್ ತಲುಪಿಸುವಷ್ಟರ ಮಟ್ಟಿಗೆ ಈ ಜಾಲ ಬೆಳೆದಿದ್ದು, ಪ್ರತಿಯೊಬ್ಬರು ನಶಾಮುಕ್ತ ಮನೆಗೆ ಕಂಕಣಬದ್ಧಾರಗಬೇಕು. ಆಗ ರಾಜ್ಯ ಮತ್ತು ದೇಶ ತಾನಾಗಿಯೇ ನಶೆ ಮುಕ್ತವಾಗುತ್ತದೆ ಎಂದು ಹೇಳಿದರು.
ರಾಜೀವ ಗಾಂಧಿ ವಿವಿ ಕುಲಪತಿ ಡಾ.ಭಗವಾನ ಬಿ.ಸಿ. ಮಾತನಾಡಿ, ಉತ್ತರದ ರಾಜ್ಯಗಳ ನಂತರ ಡ್ರಗ್ ಪೆಡ್ಲರ್‌ಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ದೇಶಾದ್ಯಂತ ಸುಮಾರು ಶೇ 30ರಷ್ಟಿದ್ದ ಮಾದಕ ವ್ಯಸನದ ವಿದ್ಯಾರ್ಥಿಗಳ ಪ್ರಮಾಣ ಶೇ.63ಕ್ಕೆ ಏರಿದೆ. ಇನ್ನು ನಾವು ಸುಮ್ಮನಿರಬಾರದು. ಇದರ ವಿರುದ್ಧ ಒಗ್ಗಟ್ಟಿನ ಸಮರ ಸಾರಬೇಕು. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾ ಎಂದರು.
ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಶ್ಯಾಮ ಘಾಟಗೆ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ದಿಶಾಬೋಧ ಫೌಂಡೇಶನ್‌ನ ಕಾಂತಿ ಶೆಟ್ಟಿ, ಎ.ಡಿ.ಧ್ರುವಕುಮಾರ, ಡಾ.ಸಂದೀಪ ಪಟ್ಟಣಶೆಟ್ಟಿ, ಡಾ. ವಿಜಯಕುಮಾರ ಲಮಾಣಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಕಾಸ ಸಿಂಗ್, ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಡಾ.ರವಿ ಪಾಟೀಲ ಇತರರಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ವಾಕ್‌ಥಾನ್ ಕೃಷ್ಣದೇವರಾಯ ವೃತ್ತ, ಚನ್ನಮ್ಮ ವೃತ್ತದ ಮೂಲಕ ಹಾಯ್ದು ಸರ್ದಾರ ಮೈದಾನದಲ್ಲಿ ಸಮಾರೋಪಗೊಂಡಿತು. ಸುಮಾರು 7 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಜಿಲ್ಲೆಯಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ವಿರುದ್ಧ ನಮ್ಮ ಪೊಲೀಸರು ಸಾಕಷ್ಟು ಕಡಿವಾಣ ಹಾಕಿದ್ದಾರೆ. ಸಾಕಷ್ಟು ನಿಗಾ ಇಟ್ಟಿದ್ದೇವೆ. ಆರು ತಿಂಗಳಿನಲ್ಲಿ 700 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.