ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಮಾದಕ ವ್ಯಸನ ತಡೆಗಟ್ಟುವ ಕುರಿತು ಕಾರ್ಯಾಗಾರವನ್ನು ನ್ಯಾಯಾಧೀಶ ಮಂಜುನಾಥ ನಾಯಕ ಉದ್ಘಾಟಿಸಿದರು. ಮೊಹಮ್ಮದರ ರೋಷನ್,ಬೊರಸೆ ಭೂಷಣ, ಕೆ.ರಾಮರಾಜನ್ ಇತರರಿದ್ದರು.
ಬೆಳಗಾವಿ:ಮಾದಕ ವಸ್ತುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ದೇಶದ ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನಗಳಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಾದಕ ವ್ಯಸನ ತಡೆಗಟ್ಟುವ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಸಮಾಜದಲ್ಲಿ ಸಲೀಸಾಗಿ ದೊರಕುವಂತಹ ಮಾದಕ ವಸ್ತುಗಳ ಬೇಡಿಕೆ ಕುಸಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಾದಕ ವಸ್ತುಗಳ ನಿಯಂತ್ರಣ ಕಾಯಿದೆಯಲ್ಲಿ ಅನೇಕ ತಾಂತ್ರಿಕ ವಿಚಾರಗಳನ್ನು ಅಳವಡಿಸಲಾಗಿದ್ದು ಇದರನ್ವಯ ತನಿಖಾಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಆರೋಪಿಗೆ ಶಿಕ್ಷೆ ಒದಗಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೋಹಮ್ಮದ್ ರೋಷನ್ ಮಾತನಾಡಿ, ಮಾದಕ ವಸ್ತುಗಳು ಸಮಾಜದಲ್ಲಿನ ಯುವ ಜನರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಯುವಕರು ದೇಶದ ಶಕ್ತಿಯಾಗಿದ್ದು, ಅವರು ತಮ್ಮ ಗುರಿ ಸಾಧನೆಗೆ ಕಠಿಣ ಪರಿಶ್ರಮಕ್ಕೆ ಒತ್ತು ನೀಡಬೇಕು ವಿನಹ ಮಾದಕ ವಸ್ತುಗಳ ದಾಸರಾಗಬಾರದು. ಯುವಕರು ಮಾದಕ ವಸ್ತುಗಳ ಸೇವನೆ ಮಾಡುವುದನ್ನು ಬಿಟ್ಟರೆ ಸಧೃಡ ಸಮಾಜ ನಿರ್ಮಾಣಕ್ಕೆ ಸಹಕಾರವಾಗಲಿದೆ ಎಂದರು.
ನಗರ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ ಮಾತನಾಡಿ, 2018ರ ಸಮೀಕ್ಷೆ ಪ್ರಕಾರ ದೇಶದಲ್ಲಿ 8 ಕೋಟಿ ಜನ ಮಾದಕ ವಸ್ತುಗಳ ವ್ಯಸನಿಗಳಿದ್ದು, ರಾಜ್ಯದಲ್ಲಿ 17 ಲಕ್ಷ ಜನ ವ್ಯಸನಿಗಳಿದ್ದಾರೆ. ದೇಶದಲ್ಲಿ ನಾನಾ ಮಾರ್ಗಗಳಿಂದ ಮಾದಕ ವಸ್ತುಗಳು ಒಳ ನುಗ್ಗುತ್ತಿವೆ. ಶಾಲಾ ಕಾಲೇಜಿನ ಸಮೀಪದಲ್ಲಿರುವ ಬೀಡಾ ಅಂಗಡಿಗಳ ಮೇಲೆ ನಿರಂತರ ನಿಗಾವಹಿಸುವ ಮೂಲಕ ಮಾದಕ ವಸ್ತುಗಳ ಮಾರಾಟವಾಗದಂತೆ ನಿಗಾ ವಹಿಸಲಾಗಿದೆ ಎಂದರು.
ಎಸ್‌ಪಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಐ.ಪಿ.ಗಡಾದ, ಅಬಕಾರಿ ಅಯುಕ್ತೆ ಆರ್.ಎಸ್.ಸಪ್ನಾ,ವಕೀಲರ ಸಂಘದ ಅಧ್ಯಕ್ಷ ಬಿ.ಜೆ. ಗಂಗಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ್, ಕಾನೂನು ನೆರವು ರಕ್ಷಣಾ ಸಮಿತಿಯ ಲಕ್ಕೇಶ ಹೆಗ್ಗನವರ, ನಿವೃತ್ತ ಡಿ.ಎಸ್.ಪಿ. ಜಿ.ಜಿ.ಮರಿಬಶೆಟ್ಟಿ ಇತರರಿದ್ದರು.