ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು.ಮೊಹಮ್ಮದರ ರೋಷನ್, ಕೆ.ರಾಮರಾಜನ್, ಭೂಷಣ ಬೊರಸೆ ಇತರರಿದ್ದರು.
ಬೆಳಗಾವಿ:ಯುವಜನಾಂಗವನ್ನು ಗುರಿಯಾಗಿಸಿ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿರುವ ಡ್ರಗ್ಸ್ ಮಾಫಿಯಾ ಯಾವುದೇ ಯುದ್ಧವಿಲ್ಲದೆ ದೇಶವನ್ನು ದುರ್ಬಲಗೊಳಿಸುವ ಅಪಾಯಕಾರಿ ವ್ಯವಸ್ಥೆಯಾಗಿದ್ದು, ಇದನ್ನು ತಡೆಯಲು ಕಠಿಣ ಕಾನೂನು ಕ್ರಮದ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,ಡ್ರಗ್ಸ್ ಎಂಬ ಸಾಮಾಜಿಕ ಪಿಡುಗಿನಿಂದ ಗ್ರಾಮ ಹಾಗೂ ನಗರಗಳನ್ನು ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಇಲ್ಲದಿದ್ದರೆ ಯುವ ಸಮುದಾಯವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಎಚ್ಚರಿಸಿದರು.
ಡ್ರಗ್ಸ್ ಮಾಫಿಯಾ ವಿರುದ್ಧ ಜಗತ್ತಿನ ಹಲವು ದೊಡ್ಡ ರಾಷ್ಟ್ರಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೂ, ನಿಯಂತ್ರಣಕ್ಕೆ ಬರುತ್ತಿಲ್ಲ. ನೆರೆಯನೇಪಾಳ, ಅಫ್ಘಾನಿಸ್ತಾನ ಸೇರಿದಂತೆ ವಿವಿಧ ಮೂಲಗಳಿಂದ ದೇಶಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಡ್ರಗ್ಸ್‌ನ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಮಾರ್ಗವಾಗಿ ಕೇರಳಕ್ಕೆ ಡ್ರಗ್ಸ್ ಸಾಗಾಟವಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಅಕ್ರಮ ಸಾಗಾಟದ ವೇಳೆ ರಾಜ್ಯದಲ್ಲಿ ಹಲವು ಬಾರಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಹೀಗಾಗಿ ಡ್ರಗ್ಸ್ ಸರಬರಾಜು ಅಥವಾ ಮಾರಾಟದ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ತಿಳಿಸಬೇಕು. ಯುವ ಸಮುದಾಯ ಜಾಗೃತಿ ವಹಿಸಬೇಕು ಎಂದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾತನಾಡಿ, ರಾಷ್ಟ್ರೀಯ ವೈದ್ಯಕೀಯ ವರದಿಯ ಪ್ರಕಾರ ಕರ್ನಾಟಕದಲ್ಲೇ ಸುಮಾರು 17 ಲಕ್ಷ ಮಂದಿ ಡ್ರಗ್ಸ್ ವ್ಯಸನಿಗಳಿದ್ದಾರೆ. ನಾಲ್ಕು ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ 1.20 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಾಲೆಗಳ ಸುತ್ತಮುತ್ತ ಡ್ರಗ್ಸ್, ಗಾಂಜಾ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಕೆ.ರಾಮರಾಜನ್ ಮಾತನಾಡಿ, ದೇಶವನ್ನು ಹಾಳು ಮಾಡುವ ಡ್ರಗ್ಸ್ ಮಾಫಿಯಾ ದಂತಹ ದುಷ್ಕೃತ್ಯಗಳಿಂದ ಯುವಜನತೆ ದೂರ ಉಳಿಯಬೇಕು. ನಮ್ಮ ಶತ್ರು ರಾಷ್ಟ್ರಗಳು ಯುದ್ದದ ಮೂಲಕ ದೇಶವನ್ನು ಎದುರಿಸಲಾಗದೆ ಡ್ರಗ್ಸ್ ಮಾಫಿಯಾ ಮೂಲಕ ದೇಶ ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಡಿಸಿಪಿ ನಿರಂಜನ್‌ರಾಜ್ ಅರಸ್, ರಾಣಿ ಚನ್ನಮ್ಮ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ್, ಕುಲಸಚಿವ ಸಂತೋಷ ಕಾಮಗೌಡ ಇತರರಿದ್ದರು.