ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಪ್ರವೇಶದಲ್ಲಿ ಅಳವಡಿಸಿರುವ ವಸ್ತ್ರಸಂಹಿತೆ ಫಲಕ.
ದಕ್ಷಿಣ ಕಾಶಿ ಖ್ಯಾತಿಯ, ಇಲ್ಲಿನ ಕಪಿಲೇಶ್ವರ ದೇವಸ್ಥಾನ ಪ್ರವೇಶಿಸಬೇಕಾದರೆ ಇನ್ನು ಮುಂದೆ ಸಾಂಪ್ರದಾಯಿಕ ಉಡುಗೆ ಧರಿಸುವುದು ಕಡ್ಡಾಯವಾಗಲಿದೆ. ಸದ್ಯಕ್ಕೆ ದೇವಸ್ಥಾನ ಸಮಿತಿ ಕಡ್ಡಾಯ ವಸ್ತ್ರಸಂಹಿತೆ ಜಾರಿಗೆ ತಂದಿಲ್ಲವಾದರೂ, ಪ್ರಾಯೋಗಿಕವಾಗಿ ಸಾಂಪ್ರದಾಯಿಕ ಉಡುಗೆ ನಿಯಮ ಜಾರಿಗೊಳಿಸಿದೆ. ಯಾವೆಲ್ಲ ಉಡುಗೆಗೆ ಅವಕಾಶವಿಲ್ಲ ಎಂಬ ಫಲಕವನ್ನು ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ.
ಪುರುಷರು ಧರಿಸುವ ಅರ್ಧ ಪ್ಯಾಂಟ್ (ಬರ್ಮೋಡಾ), ಮಹಿಳೆಯರು ಧರಿಸುವ ಗೌನ್ ಹಾಗೂ ಫ್ಯಾನ್ಸಿ ತುಂಡುಡುಗೆಗಳನ್ನು ನಿಷೇಧಿಸಲಾಗಿದೆ. ಮಹಿಳೆಯರು ಸೀರೆ ಹೊರತುಪಡಿಸಿ, ಬೇರಾವುದೇ ಉಡುಗೆ ಧರಿಸಿದ್ದರೂ ದುಪಟ್ಟಾ ಕಡ್ಡಾಯಗೊಳಿಸಲಾಗಿದೆ. ನಿತ್ಯವೂ ನೂರಾರು ಜನ ಭೇಟಿ ನೀಡುವ ದೇವಸ್ಥಾನಕ್ಕೆ ಪ್ರತಿ ಸೋಮವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಮಾವಾಸ್ಯೆಯಂದು ಜಾತ್ರೆ ಸ್ವರೂಪದಲ್ಲಿ ಜನಜಂಗುಳಿ ನೆರೆಯುತ್ತದೆ. ಆದರೆ, ಈಚೆಗೆ ಮುಜುಗರ ತರುವಂಥ ಬಟ್ಟೆ ಹಾಕಿಕೊಂಡು ದೇಗುಲಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ತಡೆಯಲು ವಸಉಸಂಹಿತೆ ಜಾರಿಗೆ ತರಲು ದೇವಸ್ಥಾನ ಸಮಿತಿ ನಿರ್ಧರಿಸಿದೆ.
ವಿವಿಧ ಬಗೆಯ ಪಾಶ್ಚಿಮಾತ್ಯ ಬಟ್ಟೆಗಳನ್ನು ಹಾಕಿಕೊಂಡು ಬಂದು ಇಲ್ಲಿರುವ ಶಿವನ ಮೂರ್ತಿ ಎದುರು ಬೇಕಾಬಿಟ್ಟಿ ರೀಲ್ಸ್ ಮಾಡುವವರ ಹಾವಳಿ ಹೆಚ್ಚಾಗಿದೆ. ಗೋವಾ ಪ್ರವಾಸ ಮುಗಿಸಿಕೊಂಡು, ತಮ್ಮೂರಿನತ್ತ ತೆರಳುವ ಹಲವು ಪ್ರವಾಸಿಗರು, ಹಾಫ್ ಪ್ಯಾಂಟ್ ಧರಿಸಿ ದೇವಸ್ಥಾನದೊಳಗೆ ಬರುತ್ತಿದ್ದಾರೆ.ಸುತ್ತಮುತ್ತಲಿನ ಮಹಿಳೆಯರು, ಬೆಳಗ್ಗೆ ಸ್ನಾನ ಮಾಡಿದ ತಕ್ಷಣ ಗೌನ್ ಧರಿಸಿ ದೇವಸ್ಥಾನ ಪ್ರವೇಶಿಸುತ್ತಿದ್ದಾರೆ. ಇದು ಅನೇಕರಿಗೆ ಮುಜುಗರ ತರಿಸುತ್ತಿದ್ದು, ಪಾವಿತ್ರೃಕ್ಕೆ ಧಕ್ಕೆ ಬಾರದಂತೆ ತಡೆಯಲು ಈ ಉಪಕ್ರಮ ಜಾರಿಗೊಳಿಸಲಾಗಿದೆ.
ℹ️ ನಿತ್ಯವೂ ವಿಶೇಷ ಪೂಜೆದೇಗುಲ ಸಂಕೀರ್ಣದಲ್ಲಿ ಕಪಿಲೇಶ್ವರ, ವಿಷ್ಣುದೇವ,ನವಗ್ರಹ, ಪರಶುರಾಮ, ದತ್ತಾತ್ರೇಯ, ಗಣೇಶ,ನಂದಿ, ನಾಗದೇವರ ಕಟ್ಟೆ, ಕಾಲಭೈರವನಾಥ,ವೀರಭದ್ರೇಶ್ವರ, ಸಾಯಿಬಾಬಾ ದೇವಸ್ಥಾನಗಳು ಒಂದೇಪ್ರಾಂಗಣದಲ್ಲಿವೆ. ನಿತ್ಯವೂ ಒಂದಿಲ್ಲೊಂದು ದೇವರವಿಶೇಷ ದಿನವಾಗಿರುತ್ತದೆ. ಹೀಗಾಗಿ, ಜನರ ಭೇಟಿನಿತ್ಯವೂ ಇದ್ದೇ ಇರುತ್ತದೆ.
ಸದ್ಯ ದೇವಸ್ಥಾನದ ಪ್ರಾಂಗಣದಲ್ಲಿ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುತ್ತಿದ್ದು, ನಿಷೇಧಿತ ಬಟ್ಟೆ ಹಾಕಿಕೊಂಡು ಬಂದವರಿಗೆ ಮುಂದಿನ ಸಲ ಈ ಬಟ್ಟೆ ಹಾಕಿಕೊಂಡು ಬರಬೇಡಿ ಎಂದು ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ದಿನಗಳ ಕಾಲ ಔಪಚಾರಿಕವಾಗಿ ಮಾತ್ರ ಈ ನಿಯಮ ಜಾರಿಯಲ್ಲಿಟ್ಟು, ಶ್ರಾವಣ ಮಾಸದ ಸಂದರ್ಭದಲ್ಲಿ ಕಡ್ಡಾಯ ವಸ್ತ್ರಸಂಹಿತೆ ಜಾರಿಗೆ ತರಲು ಯೋಜಿಸಲಾಗಿದೆ.
ಕೆಲವರು ಪ್ರವಾಸಿ ತಾಣಕ್ಕೆ ಬಂದಂತೆ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರ. ಸಾಂಪ್ರದಾಯಿಕ ಉಡುಗೆಯಲ್ಲದಿದ್ದರೂ ಸರಿಯಾದ ಬಟ್ಟೆಯಲ್ಲಿ ಬರಲಿ ಎಂಬುದೇ ನಮ್ಮ ಉದ್ದೇಶ. ಹೀಗಾಗಿ, ಫಲಕ ಹಾಕಿದ್ದೇವೆ. ಇದರಿಂದ ಸ್ವಲ್ಪ ಬದಲಾವಣೆ ಶುರುವಾಗಿದೆ. ಗೌನ್ ಹಾಕಿಕೊಂಡು ಬರುವವರು ಬದಲಾಗಿದ್ದಾರೆ.
— ರಾಹುಲ ಕುರಣೆ, ದೇವಸ್ಥಾನ ಸಮಿತಿ ಅಧ್ಯಕ್ಷ