ಸಾಮಾಜಿಕ ನಾಟಕ ಪ್ರದರ್ಶನ ದೃಶ್ಯ 
ಬೆಳಗಾವಿ

ನೆರವಿನ ನಿರೀಕ್ಷೆಯಲ್ಲಿ ಬಯಲಾಟ,ನಾಟಕ ಕಲಾವಿದರು!

ಬೆಳಗಾವಿ :ಗ್ರಾಮೀಣ ಭಾಗದ ಕಲೆ, ಸಂಗೀತ, ನೃತ್ಯ ಮತ್ತು ಪೌರಾಣಿಕ ಕಥೆಗಳನ್ನು ಜೀವಂತವಾಗಿ ಉಳಿಸಿಕೊಂಡು ಬಂದಿರುವ ಬಯಲಾಟ, ಸಾಮಾಜಿಕ, ಪೌರಾಣಿಕ, ರೌದ್ರಮಯ ನಾಟಕ ಕಲಾವಿದರಿಗೆ ಬೇಕಿದೆ ಸರ್ಕಾರದ ನೆರವಿನ ಹಸ್ತ!
ಹೌದು. ರಾಜ್ಯದಲ್ಲಿಯೇ ಅತಿ ಹೆಚ್ಚು ನಾಟಕ, ಬಯಲಾಟ ಕಲಾವಿದರನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿರುವ 8 ಸಾವಿರಕ್ಕೂ ಅಧಿಕ ಕಲಾವಿದರು ವೃತ್ತಿ ರಂಗಭೂಮಿಯ ನಂಬಿ, ಕಲೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬಹುತೇಕ ಕಲಾವಿದರಿಗೆ ಸರ್ಕಾರ, ಅಕಾಡೆಮಿದಿಂದ ಸವಲತ್ತು ಸಿಗುತ್ತಿಲ್ಲ. ಈಗಲೂ ನಾಟಕ ಪ್ರದರ್ಶನ ರಂಗಮಂದಿರ, ತಾಲೀಮೂ ಕೇಂದ್ರಗಳು ಇಲ್ಲದೆ ಸರ್ಕಾರಿ ಶಾಲೆ, ಅಂಗಡಿ, ದೇವಸ್ಥಾನ ಆವರಣದಲ್ಲಿ ನಾಟಕ, ಬಯಲಾಟ ಕಲಿಯುವ ಸ್ಥಿತಿ ಇದೆ.
ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಜಾತ್ರೆ, ಉತ್ಸವ ಸಂದರ್ಭದಲ್ಲಿ ನಾಟಕ ನಾಟ್ಯ ಸಂಘಗಳು, ಶ್ರೀಕೃಷ್ಣ ಪಾರಿಜಾತ, ವಿವಿಧ ನಾಟಕ ಕಂಪನಿ ಕಲಾವಿದರು ಪಾತ್ರಗಳಿಗೆ ತಕ್ಕಂತೆ ವೇಷಭೂಷಣ ಧರಿಸಿ, ಭಾವುಕತೆ, ಧ್ವನಿ ಏರಿಳಿತದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ. ಸಂಗೀತ ಮತ್ತು ನೃತ್ಯವು ಇವರ ಅಭಿನಯದ ಅವಿಭಾಜ್ಯ ಅಂಗವಾಗಿದೆ.ರಾಮಾಯಣ, ಮಹಾಭಾರತದ ಪ್ರಸಂಗಗಳು ಮತ್ತು ಸ್ಥಳೀಯ ದೈವಗಳ ಕಥೆಗಳನ್ನು ಕಲಾವಿದರು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಆದರೆ,ಆರ್ಥಿಕ ಮುಗ್ಗಟ್ಟು, ಬದಲಾದ ಪ್ರೇಕ್ಷಕರ ಅಭಿರುಚಿ, ಪ್ರೋತ್ಸಾಹದ ಕೊರತೆ ಹೀಗೆ ಮೊದಲಾದ ಕಾರಣಗಳಿಂದ ವೃತ್ತಿ ರಂಗಭೂಮಿಯು ಕುಂಟುತ್ತಾ ಸಾಗಿದೆ.
ಬೆಳ್ಳಿ ಪರದೆ, ಕಂಪ್ಯೂಟರ್, ಮೊಬೈಲ್ , ಸಾಮಾಜಿಕ ಜಾಲತಾಣಗಳೊಂದಿಗೆ ಸೆಣಸಾಡುತ್ತಲೇ ವೃತ್ತಿ ರಂಗಭೂಮಿಯ ಜೀವಂತ ಕಲೆಯಾದ ನಾಟಕ ಮತ್ತು ಬಯಲಾಟಗಳು ಅಪರೂಪವಾಗುತ್ತಿವೆ.ಈ ಕಲೆಯು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಕಲಾವಿದರು ಅಳವಿನಂತಿಯಲ್ಲಿರುವ ಈ ಸಂಸ್ಕೃತಿಯನ್ನು ಮರುಜೀವಗೊಳಿಸುವ ಸಂಕಷ್ಟಗಳ ನಡುವೆಯೂ ರಂಗಭೂಮಿಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ ನಾಟಕಾಭಿಮಾನಿಗಳನ್ನು ರಂಜಿಸುತ್ತಿರುವ ನಾಟಕ ಕಂಪನಿಗಳು, ನಾಟ್ಯ ಸಂಘಗಳು ಉಳಿವಿಗೆ ಸರ್ಕಾರ ಕೈಜೋಡಿಸಬೇಕು ಎಂಬುದು ರಂಗಪ್ರೇಮಿಗಳ ಒತ್ತಾಯಿಸಿದ್ದಾರೆ.
.......
ಬಾಕ್ಸ್
ಸೌಲಭ್ಯಕ್ಕಾಗಿ ಕಲಾವಿದರು ಅಲೆದಾಟ
ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ, ಮರಾಠಿ ಭಾಷಿಕ ವೃತ್ತಿ ರಂಗಭೂಮಿ ಕಲಾವಿದರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಭಾಗದ ಕಲಾವಿದರಿಗೆ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನ ಸೇರಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಐದು ದಶಕದ ಅವಧಿಯಲ್ಲಿ ಜಿಲ್ಲೆಗೆ 5 ಜನ ನಾಟಕ, 10 ಬಯಲಾಟ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಬಿಟ್ಟರೆ ಬೇರೆ ಯಾವುದೇ ರೀತಿಯ ಸ್ಥಾನಮಾನ, ಆರ್ಥಿಕ ಸಹಾಯಧನ, ಪ್ರೋತ್ಸಾಹಧನ ದೊರೆತಿಲ್ಲ. ಈಗಲೂ ಪಿಂಚಣಿ, ಇತರೆ ಸೌಲಭ್ಯಕ್ಕಾಗಿ ಕಚೇರಿಗಳಿಗೆ ಕೆಲ ಹಿರಿಯ ಅಲೆದಾಟ ತಪ್ಪಿಲ್ಲ.
.......................
ಬಾಕ್ಸ್
ಜಿಲ್ಲೆಯಲ್ಲಿ ನಾಟಕ, ಬಯಲಾಟ ಕಲಾವಿದರ ವಿವರ
ಕಲೆ ಪುರಷರು ಮಹಿಳೆಯರು ಒಟ್ಟು
ನಾಟಕ 2,000 1,000 3,000
ಬಯಲಾಟ 3,000 2,000 5,000
ಒಟ್ಟು 5,000 3,000 8,000
....................
ಬೆಳಗಾವಿ ಮಹಾನಗರದಲ್ಲಿ ಜಾಗದ ಕೊರತೆಯಿಂದಾಗಿ ಬಯಲಾಟ, ನಾಟಕ ಕಲಾವಿದರಿಗೆ ಶಾಶ್ವತ ತಾಲೀಮ ಕೇಂದ್ರ ಆರಂಭಿಸಲು ಸಾಧ್ಯವಾಗಿಲ್ಲ. ಬೆಂಗಳೂರು ಮಾದರಿಯಲ್ಲಿಯೇ ಬೆಳಗಾವಿ ಭಾಗದಲ್ಲಿ ವರ್ಷಪೂರ್ತಿ ನಾಟಕ ಪ್ರದರ್ಶನ, ತರಬೇತಿ ಕಾರ್ಯಕ್ರಮ ನಡೆಸಲು ಅಕಾಡೆಮಿಯಿಂದ ಕ್ರಮ ಕೈಗೊಳ್ಳಲಾಗುವುದು. ಕಲಾವಿದರಿಗೆ ಪ್ರೋತ್ಸಾಹಿಸುವೆ ಕೆಲಸ ಆಗಬೇಕಿದೆ.
-ಕೆ.ವಿ. ನಾಗರಾಜ್ ಮೂರ್ತಿ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ
..........
ಹಳ್ಳಿಗಳಲ್ಲಿರುವ ಸಾಮಾಜಿಕ, ಪೌರಾಣಿಕ, ಬಯಲಾಟ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ರಂಗಮಂದಿರ, ತಾಲೀಮು ಕೇಂದ್ರದ ಸೌಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು ಭಾಗದಲ್ಲಿನ ಕಲಾವಿದರಿಗೆ ಸಿಗುವ ವೇದಿಕೆ ಬೆಳಗಾವಿ ಭಾಗದ ಕಲಾವಿದರಿಗೂ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು.
-ಮಲ್ಲಿಕಾರ್ಜುನ ಪರಪ್ಪನವರ, ಕೃಷ್ಭಾ ಯರಗಣವಿ, ನಾಟಕ ಮಾಸ್ತರರು
.............