ಅಥಣಿ ರಾಘವೇಂದ್ರಸ್ವಾಮಿ ಸಭಾಭವನದಲ್ಲಿ ಮದ್ಯವರ್ಜನ ಶಿಬಿರದ ಸಮಾರೋಪವನ್ನು ಅರವಿಂದ ದೇಶಪಾಂಡೆ ಉದ್ಘಾಟಿಸಿದರು. ಚಿದಾನಂದ ಸವದಿ, ಶಶಿಕಾಂತ ಗುರೂಜಿ, ಡಾ.ರಾಮ ಕುಲಕರ್ಣಿ, ಗಜಾನನ ಮಂಗಸೂಳಿ, ಶಿವಶಂಕರ ಹಂಜಿ, ಅಮರ ದುರ್ಗಣ್ಣವರ ಇತರರಿದ್ದರು.
- ಆರ್‌ಎಸ್‌ಎಸ್ ಹಿರಿಯ ಮುಖಂಡ ಅರವಿಂದ ದೇಶಪಾಂಡೆ ಮೆಚ್ಚುಗೆ
- ಮದ್ಯವರ್ಜನ ಶಿಬಿರ
ಅಥಣಿ: ಸರ್ಕಾರ ಮಾಡದ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಯ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಆರ್‌ಎಸ್‌ಎಸ್ ಹಿರಿಯ ಮುಖಂಡ ಅರವಿಂದ ದೇಶಪಾಂಡೆ ಹೇಳಿದರು.
ರಾಘವೇಂದ್ರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಥಣಿ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜತೆಗೆ ಜನರು ಮದ್ಯವ್ಯಸನಿಗಳಾಗದೆ, ಸುಂದರ ಜೀವನ ರೂಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವ ಜತೆಗೆ ಮದ್ಯ ಮುಕ್ತ ಅಭಿಯಾನಕ್ಕೆ ಪಕ್ಷಾತೀತ ಬೆಂಬಲಿಸುತ್ತೇವೆ. ಆದರೆ, ಇದು ಕಷ್ಟಸಾಧ್ಯ. ೮೦ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ಯುವಕರು ದುಶ್ಚಟಗಳ ದಾಸರಾಗದೆ ಸನ್ಮಾರ್ಗದತ್ತ ಮುನ್ನಡೆಯಲು ಇಂತಹ ಶಿಬಿರ ಪ್ರೇರಣೆಯಾಗಿವೆ ಎಂದರು.
ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಬೇಕು. ಅಂದಾಗ ಜನರು ಸುಭಿಕ್ಷೆಯಿಂದ ಸುಂದರ ಬದುಕು ನಡೆಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಅಭಿಯಾನ ಆರಂಭಿಸಲಿದ್ದು, ಸಮಾಜದಲ್ಲಿ ಬದಲಾವಣೆಯಾಗಬೇಕು. ಅನೇಕ ಯುವಕರು ಚಿಕ್ಕವಯಸ್ಸಿನಲ್ಲಿ ಮದ್ಯವ್ಯಸನಿಯಾಗಿ ಕುಟುಂಬಕ್ಕೆ ಮಾರಕವಾಗಿದ್ದಾರೆ. ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತುತ್ತಿರುವ ಧರ್ಮಸ್ಥಳದ ಸೇವಾಕಾರ್ಯ ಅಮೋಘ ಎಂದರು.
ಹಿರಿಯರಾದ ಡಾ.ರಾಮ ಕುಲಕರ್ಣಿ, ಪ್ರಕಾಶ ಮಹಾಜನ, ಎಸ್.ಎಸ್.ಅನಿಲಕುಮಾರ, ಸಂಜಯ ನಾಡಗೌಡ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಇದೆ. ಅದಕ್ಕೆ ಮದ್ಯವಸನಿಗಳು ಇನ್ನಾದರೂ ಉತ್ತಮ ಬದುಕು ರೂಪಿಸಿಕೊಂಡು ಕುಟುಂಬದವರೊAದಿಗೆ ಸುಖ, ಸಂತೋಷದಿಂದ ಬದುಕಿ ಎಂದರು.
ಹಿರಿಯ ಸಮಾಜ ಸೇವಕ ಗಜಾನನ ಮಂಗಸೂಳಿ, ಅಮರ ದುರ್ಗಣ್ಣವರ, ವಿಜಯಕುಮಾರ ಬುರ್ಲಿ, ಡಾ.ಜ್ಯೋತಿ ಕುಮಠಳ್ಳಿ, ಶ್ರೀಶೈಲ ನಾರಗೊಂಡ, ರವಿ ಬಡಕಂಬಿ, ಮೃಣಾಲಿನಿ ದೇಶಪಾಂಡೆ, ಜಗದೀಶ ಹುಲ್ಲತ್ತಿ, ಅಂಜನಾ ಖಾನಟ್ಟಿ, ಧನಪಾಲ ಮೆಕನಮರಡಿ, ರಾಜು ಚೌಗಲೆ, ವಿನೋದ ಕನಮಡಿ, ಸುರೇಶ ಚಿಕ್ಕಟ್ಟಿ, ರಾಜು ಐಹೊಳೆ, ಮಹಾಂತೇಶ ಬಾಡಗಿ, ಶಿವಾನಂದ ಹುನ್ನೂರ, ಪ್ರಫುಲ್ ಪಡನಾಡ, ನಟರಾಜ ಬಾದಾಮಿ ಇತರರು ಇದ್ದರು.