ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಪ್ರಭಾಕರ ಕೋರೆ, ಮಲ್ಲಿಕಾರ್ಜುನ ಕೋರೆ, ಜೆ.ಎಸ್.ತಮ್ಮಗೌಡ, ಬಿ.ಎಸ್.ಅಂಬಿ ಇತರರಿದ್ದರು. 
ಬೆಳಗಾವಿ

ಯುವ ಸಮೂಹ ದೇಶದ ಸಂಪತ್ತು

ಮಾಂಜರಿ: ತಂತ್ರಜ್ಞಾನದ ಯುಗದಲ್ಲಿರುವ ಯುವ ಸಮೂಹ ದೇಶದ ಸಂಪತ್ತಾಗಿದ್ದು, ಯುವಕರು ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಬೇಕು. ಶಿಕ್ಷಣದಿಂದ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಮಾತೋಶ್ರೀ ಶಾರದಾದೇವಿ ಕೋರೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಉತ್ತಮ ನಡೆ ಅನುಸರಿಸಿ, ಗುರು-ಹಿರಿಯರಿಗೆ, ತಂದೆ-ತಾಯಿಗೆ ಗೌರವ ತರಬೇಕು.
ಯುವ ಶಕ್ತಿಯಲ್ಲಿ ಅಪಾರ ಕೌಶಲ ಅಡಗಿದೆ. ಅದರ ಸದ್ಬಳಕೆ ಮಾಡಿಕೊಂಡು ಉನ್ನತ ಗುರಿ ತಲುಪಬೇಕು. ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ಉನ್ನತ ಸ್ಥಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಮಹಾವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಿದ್ದೇವೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ, ಸಾಧನೆ ಮಾಡುವ ಮೂಲಕ ಪಾಲಕರಿಗೆ, ಗುರುಗಳಿಗೆ ಕೀರ್ತಿ ತರಬೇಕು. ಮನಸಿದ್ದರೆ ಮಾರ್ಗ ಎಂಬಂತೆ ಮಹಾನ್ ವ್ಯಕ್ತಿಗಳು ಬಡತನದಲ್ಲಿ ಶಿಕ್ಷಣ ಪೂರೈಸಿ, ಮಹತ್ತರ ಸಾಧನೆ ಮಾಡಿದ್ದಾರೆ. ಇಂಥ ಮಹಾತ್ಮರನ್ನು ಯುವಕರು ಆದರ್ಶವಾಗಿರಿಸಿಕೊಂಡು ದೇಶದ ಬೆನ್ನೆಲುಬಾಗಬೇಕು ಎಂದರು.
ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್.ಅಂಬಿ, ಉಪಪ್ರಾಚಾರ್ಯ ಜೆ.ಎಸ್.ತಮ್ಮಗೌಡ, ವಿ.ಡಿ.ನಾಯಕ, ಸಿ.ಬಿ.ಚೌಗುಲೆ, ಎ.ಡಿ.ಜಾಧವ, ಎಂ.ಆರ್.ನಾಗರಾಜ, ವಿ.ಜಿ.ಪಾಟೀಲ ಇತರರಿದ್ದರು.