ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೌಲ್ಯವರ್ಧನೆ ತರಬೇತಿಯನ್ನು ಮಂಜುನಾಥ ಚೌರಡ್ಡಿ, ಸೋಮಪ್ಪ ತೋಟಗೇರಿ, ಡಾ.ರಾಮಚಂದ್ರ ಮಡಿವಾಳ ಇತರರು ಉದ್ಘಾಟಿಸಿದರು.
ಬೆಳಗಾವಿ: ಕಬ್ಬು ಬೆಳೆಯುವ ಕ್ಷೇತ್ರದಲ್ಲಿ ಪರ್ಯಾಯವಾಗಿ ಅರಿಶಿಣ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ಅಧಿಕ ಲಾಭಗಳಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.
ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅರಿಶಿಣ ಬೆಳೆ ಉತ್ಪಾದನಾ ತಾಂತ್ರಿಕತೆ ಹಾಗೂ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಆದಾಯದ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುವುದರ ಜತೆಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ವರ್ಷ ಪೂರ್ತಿ ಒಂದೇ ಬೆಳೆ ಮೇಲೆ ಅವಲಂಬಿತರಾಗಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಪ್ರಧಾನ ವ್ಯವಸ್ಥಾಪಕ ಡಾ.ರಾಮಚಂದ್ರ ಮಡಿವಾಳ ಮಾತನಾಡಿ, ಆಹಾರ ಧಾನ್ಯ ಮಾತ್ರ ಬೆಳೆಯದೇ ತೋಟಗಾರಿಕೆ ಬೆಳೆಗಳನ್ನೂ ಬೆಳೆಯಬೇಕು. ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳು ಇರುವುದರಿಂದ ವಿವಿಧ ಬೆಳೆಗಳನ್ನು ಬೆಳೆದು ಮೌಲ್ಯವರ್ಧನೆ ಮಾಡಿ ಉದ್ದಿಮೆದಾರರಾಗಿ ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು.
ಅಸುಂಡಿ ಗ್ರಾಪಂ ಅಧ್ಯಕ್ಷ ಈರಪ್ಪ ತೋಟಗೇರ ಮಾತನಾಡಿ, ರೈತರು ಒಂದೇ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗಿ ಕೃಷಿ ಲಾಭದಾಯಕವಾಗುತ್ತಿಲ್ಲ. ಆದ್ದರಿಂದ ರೈತರು ಎಲ್ಲ ತರಹದ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕವಾಗಿಸಬೇಕು ಎಂದರು. ತೋಟಗಾರಿಕೆ ಇಲಾಖೆ ಸವದತ್ತಿ ವಿಭಾಗದ ಸಹಾಯಕ ನಿರ್ದೇಶಕ ರಮೇಶ ಹಾವರಡ್ಡಿ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಅರಿಶಿಣ ಬೆಳೆರೈತರಿಗೆ ಮಣ್ಣು ಮತ್ತು ನೀರು ಪರೀಕ್ಷೆ, ಬೀಜೋಪಚಾರಕ್ಕೆ ಬೇಕಾಗುವ ಔಷಧ, ರೋಗ, ಕೀಟ ನಿರ್ವಹಣೆ, ಕೃಷಿ ಹೊಂಡ ನಿರ್ಮಾಣಕ್ಕೆ, ಸೌರಚಾಲಿತ ಪಂಪ್‌ಸೆಟ್ ಅಳವಡಿಕೆ, ಹನಿ ನೀರಾವರಿ ಪದ್ಧತಿ ಹಾಗೂ ಅರಿಶಿಣಕೊಂಬು ಸಂಸ್ಕರಿಸಲು ಸಹಾಯಧನ ಒದಗಿಸಲಾಗುತ್ತಿದೆ ಎಂದರು.
ಕಲ್ಲೋಳಿ ಪ್ರಗತಿಪರ ರೈತ ರಮೇಶ ಕಾನಗೌಡರ, ಕೇಂದ್ರದ ತೋಟಗಾರಿಕೆ ವಿಜ್ಞಾನಿ ಪ್ರವೀಣ ಯಡಹಳ್ಳಿ, ಮಣ್ಣು ವಿಜ್ಞಾನಿ ಎಸ್.ಎಂ.ವಾರದ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶ್ರೀಶೈಲ ಅಂಗಡಿ, ಕುಮಾರ ಗಾಣಗಿ ಇತರರಿದ್ದರು.