ಬೆಳಗಾವಿ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು. ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಡಿಸಿ ಮೊಹಮ್ಮದ್ ರೋಷನ್, ಸಿಇಒ ರಾಹುಲ ಶಿಂಧೆ ಇತರರಿದ್ದರು.  
ಬೆಳಗಾವಿ

ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ

ಬೆಳಗಾವಿ: ವೇಮನ ಕೇವಲ ರೆಡ್ಡಿ ಸಮುದಾಯಕ್ಕೆ ಮಾತ್ರ ಸೇರಿದವರಲ್ಲ, ಎಲ್ಲ ಸಮಾಜಕ್ಕೆ ಸೇರಿದವರು. ಅಂದಿನ ಕಾಲಘಟ್ಟದಲ್ಲಿ ಅವರು ಜಾತಿ ನಿರ್ಮೂಲನೆಗೆ ಶ್ರಮಿಸಿದರು. ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ ಎಂದು ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ.ಪಿ.ಜಿ.ಕೆಂಪನ್ನವರ ತಿಳಿಸಿದರು.
ಸದಾಶಿವ ನಗರದ ರೆಡ್ಡಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವೇಮನ ತೆಲುಗು ಭಾಷೆಯ ಶ್ರೇಷ್ಠ ಕವಿ. ವೇಮನರ ವಚನಗಳು ಮುಂದಿನ ಪೀಳಿಗೆಗೆ ಅರಿತು ಮುನ್ನಡೆಯಬೇಕಿದೆ. ವೇಮನರ ವಚನಗಳ ಕುರಿತು ಯುವಕರಲ್ಲಿ ಅರಿವು ಮೂಡಬೇಕು. ವೇಮನ ಒಬ್ಬ ಕವಿಯಾಗಿ ತತ್ತ್ವಜ್ಞಾನಿಯಾಗಿ ಆದರ್ಶ ವ್ಯಕ್ತಿಯಾಗಿ ಬಾಳಿದವರು. ಅಂತರಂಗ ಶುದ್ಧಿಗಾಗಿ ಇಂತಹ ಮಹನೀಯರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.
ಮುಗಳಿಹಾಳದ ಸೋಮಲಿಂಗ ಶಾಸ್ತ್ರಿ ಮಾತನಾಡಿ, ವೇಮನರ ವಚನ ಕಲಿತರೆ ಜೀವನ ಪಾವನ. ನಿಮ್ಮ ಮಕ್ಕಳಿಗೆ ವೇಮನರ ವಚನ ಕಲಿಸಿರಿ. ತಾಯಿಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ರೆಡ್ಡಿ ಸಂಘ ಅಧ್ಯಕ್ಷ ರಾಮಣ್ಣ ಮುಳ್ಳೂರು ಮಾತನಾಡಿ, ಪ್ರತಿಯೊಬ್ಬರೂ ವೇಮನರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಇಂದಿರಾ ಮಳಲಿ ಇತರರಿದ್ದರು.