ಚಿಕ್ಕೋಡಿ ಸಿ.ಬಿ.ಕೋರೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರಕ್ಕೆ ಗಣ್ಯರು ಚಾಲನೆ ನೀಡಿದರು. ಎಂ.ಪನಿಶಯನ್, ಡಾ.ಬಿ.ಜಿ.ಕುಲಕರ್ಣಿ, ಡಾ.ದರ್ಶನ ಬಿಳ್ಳೂರ ಇತರರಿದ್ದರು.
ಚಿಕ್ಕೋಡಿ: ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಹೆಸರು ಹೇಳಿ ವಂಚಿಸುವ ಸೈಬರ್ ಕಳವು ಪ್ರಕರಣ ಹೆಚ್ಚಾಗಿದ್ದು, ಖದೀಮರ ಆಸೆ, ಆಮಿಷ, ಸಂಚುಗಳಿಗೆ ಒಳಗಾಗಬಾರದು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಎಂ.ಪನಿಶಯನ್ ಹೇಳಿದರು.
ಇಲ್ಲಿನ ಸಿ.ಬಿ. ಕೋರೆ ಕಾಲೇಜಿನ ಸಭಾಭವನದಲ್ಲಿ ಕೆಎಲ್‌ಇ ಸಂಸ್ಥೆಯ ಬಸಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಚಿಕ್ಕೋಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೆನರಾ ಬ್ಯಾಂಕ್ ಸಹಯೋಗದಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರೂ ಸರ್ಕಾರಿ ಬ್ಯಾಂಕುಗಳಲ್ಲಿ ಹಣ ಹೂಡಬೇಕು. ಕೆನರಾ ಬ್ಯಾಂಕ್‌ನಲ್ಲಿ ಹೆಣ್ಣುಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಶುಲ್ಕರಹಿತ ವಿಮೆಯಿದ್ದು, ಲಾಭ ಪಡೆಯಬಹುದು ಎಂದರು.
ಆರ್‌ಬಿಐ ಮ್ಯಾನೇಜರ್ ಚೇತನಕುಮಾರ ಮಾತನಾಡಿ, ಸೈಬರ್ ಕಳ್ಳರಿಗೆ ಓಟಿಪಿ, ಸಿವಿವಿ ನೀಡಬಾರದು ಎಂದರು.
ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜು ಪ್ರಾಚಾರ್ಯ ಡಾ.ದರ್ಶನ ಬಿಳ್ಳೂರ ಮಾತನಾಡಿ, ಯುವಜನತೆ ಸೈಬರ್ ಅಪರಾಧ ಪ್ರಕರಣಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದರು.
ಬಿಕೆ ಕಾಲೇಜು ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿದರು.
ಪತ್ರಕರ್ತರ ಸಂಘದ ಚಿಕ್ಕೋಡಿ ಅಧ್ಯಕ್ಷ ರಾಜೇಂದ್ರ ಕೋಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಗೋಡಕೆ, ಉಪಪ್ರಾಚಾರ್ಯ ಸುಧೀರ ಕೋಟಿವಾಲೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಎಂಸಿಎ ಮುಖ್ಯಸ್ಥ ಸುನೀಲ ಶಿಂಧೆ, ಎಂಬಿಎ ಮುಖ್ಯಸ್ಥ ಡಾ.ಸಂಜಯ ಹಣಗಂಡಿ, ಡಾ.ವಿನಾಯಕ ಮಂಜಲಪೂರ, ಜಗದೀಶ ಮುಧೋಳ, ಮಧು ಮುನಸೆ, ಅಚಲ ಮೋಹಿತೆ, ತೇಜಸ್ವಿನಿ ದುಂಡಗೆ ಇತರರಿದ್ದರು.