ಕೊಕಟನೂರಿನಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಡಾ.ಚಂದ್ರಕಾಂತ ದೂಳಶೆಟ್ಟಿ ಚಾಲನೆ ನೀಡಿದರು. ಡಾ.ಸುಕನ್ಯಾ ಹಂಡಗೆ, ರಮೇಶ ರಾಠೋಡ, ಸಂಗೀತಾ ಕಾಂಬಳೆ, ಭೀಮರಾಯ ಬಾಗೇವಾಡಿ ಇತರರಿದ್ದರು.
ಅಥಣಿ ಗ್ರಾಮೀಣ: ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು. ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ಪಾಲಕರು ಸಹಕರಿಸಬೇಕು ಎಂದು ವೈದ್ಯಾಧಿಕಾರಿ ಡಾ.ಚಂದ್ರಕಾಂತ ದೂಳಶೆಟ್ಟಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ರಾಷ್ಟವನ್ನಾಗಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಪೋಲಿಯೋ ಬೂತ್‌ಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಆಯುಷ್ ವೈದ್ಯೆ ಡಾ.ಸುಕನ್ಯಾ ಹಂಡಗೆ ಮಾತನಾಡಿ, ಕೇವಲ ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳ ಜೀವಮಾನದ ರಕ್ಷಣೆಯಾಗಿದೆ. ಹಾಗಾಗಿ ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಸಿಬ್ಬಂದಿಗಳಾದ ರಮೇಶ ರಾಠೋಡ, ಕಿರಣ ಬೂಯಾರ, ಸಂಗೀತಾ ಕಾಂಬಳೆ, ಭೀಮರಾಯ ಬಾಗೇವಾಡಿ, ಸುರೇಖಾ ಸಂಕ್ರಟ್ಟಿ, ರೇಷ್ಮಾ ಹೊನಕಾಂಬಳೆ, ವಿಲಾಸ ರಾಠೋಡ, ಕಾವೇರಿ ಕಟ್ಟಿಮನಿ, ಸುರೇಖಾ ಮಾದರ, ರೂಪಾ ಕೋಳಿ, ಶೋಭಾ ಹಿಪ್ಪರಗಿ, ಸೋನಾಲಿ ರಬಕವಿ, ಅರಿಹಂತ ಗಂಜೆ, ಮೌಸಿನ್ ಸಲಗರ ಇತರರಿದ್ದರು.