ಹುಕ್ಕೇರಿ ಹೊರವಲಯದ ಬಾಪೂಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ೧೮ನೇ ಕಿರಿಯರ ರಾಷ್ಟ್ರೀಯ ಚಾಂಪಿಯನ್ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಿದರು. ಡಾ.ಈಶ್ವರ ಉಳ್ಳಾಗಡ್ಡಿ, ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಸ್ವಾಮೀಜಿ, ಎ.ಎಸ್.ಬೂದಿಗೊಪ್ಪ ಇತರರಿದ್ದರು. 
ಬೆಳಗಾವಿ

ಆತ್ಮವಿಶ್ವಾಸ ಹೆಚ್ಚಿಸುವ ಕ್ರೀಡೆ ಡಾಡ್ಜ್ ಬಾಲ್

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮೆಚ್ಚುಗೆ
  • ಪಂದ್ಯಾವಳಿಗೆ ಚಾಲನೆ
ಹುಕ್ಕೇರಿ: ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಸೂರ್ತಿ ನೀಡುವ ಡಾಡ್ಜ್ ಬಾಲ್ ಪಂದ್ಯಾವಳಿ ಇತ್ತೀಚಿನ ದಿನಗಳಲ್ಲಿ ಜನಮನ ಸೆಳೆಯುತ್ತಿದೆ. ಈಗಾಗಲೇ ೧೬೦ ದೇಶಗಳಲ್ಲಿ ಈ ಕ್ರೀಡೆ ಆಡಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಸಾರ್ವಜನಿಕ ಸೂಚನಾ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಹೊರವಲಯದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೧೮ನೇ ಕಿರಿಯರ ರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕಬಡ್ಡಿ ಇದೀಗ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಪರಿವರ್ತನೆಗೊಂಡಿದೆ. ಕ್ರೀಡಾಕೂಟದಲ್ಲಿ ದೇಶದ ೨೦ ರಾಜ್ಯಗಳ ೩೫ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿರುವುದೇ ನಿದರ್ಶನವಾಗಿದೆ ಎಂದರು.
ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಯಕುಮಾರ ನವಲಗುಂದ ಮಾತನಾಡಿ, ರಾಷ್ಟ್ರೀಯ ಕ್ರೀಡಾಕೂಟವನ್ನು ಹುಕ್ಕೇರಿಯಲ್ಲಿ ಆಯೋಜಿಸಲು ಸಹಕರಿಸಿದ ರಾಷ್ಟ್ರೀಯ ಡಾಡ್ಜ್ ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಭಾಗದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವುದರ ಜತೆಗೆ ಗ್ರಾಮೀಣ ಭಾಗದ ಮಕ್ಕಳು ರಾಷ್ಟ್ರೀಯ ಕ್ರೀಡಾಪಟುಗಳಾಗಿ ಕೀರ್ತಿ ತರಲಿ ಎಂಬುದೇ ನಮ್ಮ ಸಂಸ್ಥೆ ಕನಸು ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮೊದಲು ಗ್ರಾಮೀಣ ಭಾಗದಲ್ಲಿ ದಪ್ಪಾದುಪ್ಪಿ ಅಂತಾ ಅರಿವೆ ಚಂಡಿನಿಂದ ಈ ಆಟ ಆಡಲಾಗುತ್ತಿತ್ತು. ಇದೀಗ ಸುಧಾರಿಸಿದ ರೀತಿಯಲ್ಲಿ ಡಾಡ್ಜ್ ಬಾಲ್ ಆಟವಾಗಿ ಪರಿವರ್ತನೆಗೊಂಡಿದೆ ಎಂದರು.
ಬಾಪೂಜಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಡಾ.ಹೊಳಬಸಯ್ಯ ಸಂಕಣ್ಣವರ ಕ್ರೀಡೆ ಕುರಿತು ವಿವರಿಸಿದರು. ೨೦ ರಾಜ್ಯಗಳ ೩೫ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಏ೨೪ರಿಂದ ೨೬ ರವರೆಗೆ ಪಂದ್ಯಗಳು ನಡೆಯಲಿವೆ.
ಕಮತ್ಯಾನಟ್ಟಿಯ ವಿರೂಪಾಕ್ಷ ಸ್ವಾಮೀಜಿ, ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎ.ಎಸ್.ಬೂದಿಗೊಪ್ಪ, ಡಿಡಿಪಿಐ ಆರ್.ಎಸ್.ಸೀತಾರಾಮು, ಬಿಇಒ ಪ್ರಭಾವತಿ ಪಾಟೀಲ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಹಾಂತೇಶ ಬಸ್ಸಾಪುರ, ಜಾವೇದ್ ಮುಶಾಪುರಿ, ಜಿನಗೌಡ ಇಮಗೌಡನವರ, ರಾಜು ಚೌಗಲಾ, ಗೋಪಾಲ ಹೂಗಾರ, ಲಕ್ಷ್ಮಣ ಪಡಿಮನಿ, ಬಸವರಾಜ ಅಮ್ಮಣಗಿ ಇತರರಿದ್ದರು.