ಬೆಳಗಾವಿಯಲ್ಲಿ ಭಾನುವಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿರೋಧಿಸಿ ನಡೆದ ಜಿಲ್ಲಾಮಟ್ಟದ ಪೋಷಕರ ಸಭೆಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ಪೋಷಕರು ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.
ಬೆಳಗಾವಿ: ಗಡಿ ಭಾಗದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಕನ್ನಡ ಮತ್ತು ಮರಾಠಿಗರು ಒಂದಾಗಿ ಹೋರಾಡಬೇಕಿದ್ದು, ಈ ಒಗ್ಗಟ್ಟು ಐತಿಹಾಸಿಕ ಹೋರಾಟವಾಗಿ ರಾಜ್ಯಕ್ಕೆ ವ್ಯಾಪಿಸುವಂತಾಗಬೇಕು ಎಂದು ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ನೀತಿ ವಿರೋಧಿಸಿ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪೋಷಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ರಾಜ್ಯದ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ, ಮರಾಠಿ, ಉರ್ದು ಮಾಧ್ಯಮದ 2,000ಕ್ಕೂ ಹೆಚ್ಚು ಶಾಲೆಗಳಿವೆ. ಇಷ್ಟೆಲ್ಲ ನಡೆದರೂ ಸದನದ ಒಳಗೆ ಮತ್ತು ಹೊರಗೆ ಶಿಕ್ಷಣ ಸಚಿವರು ಒಂದೂ ಶಾಲೆ ಮುಚ್ಚುವುದಿಲ್ಲವೆಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದು, ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು.
ನಾಟಕಕಾರ ಡಾ.ಡಿ.ಎಸ್.ಚೌಗಲೆ ಮಾತನಾಡಿ, ಇದು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಬಡವರನ್ನು ಕಡು ಬಡತನಕ್ಕೆ ತಳ್ಳುವ ಸ್ಪಷ್ಟ ವರ್ಗೀಕರಣದ ಯೋಜನೆ. ಸರ್ಕಾರ ಕೂಡಲೇ ಕೈಬಿಟ್ಟು ಹಳ್ಳಿಯ ಶಾಲೆಗಳನ್ನು ಉನ್ನತೀಕರಿಸಬೇಕು. ಕನ್ನಡ ಶಾಲೆಗಳು ಉಳಿದರೆ ಮಾತ್ರ ಸಾಹಿತಿಗಳು ಮತ್ತು ನಾಟಕಕಾರರು ಬರೆಯುವುದು ಜನಗಳಿಗೆ ತಲುಪುತ್ತದೆ. ಎಲ್ಲಾ ಸಾಹಿತಿಗಳು ಹೋರಾಟಕ್ಕೆ ಧ್ವನಿಗೂಡಿಸಬೇಕಿದೆ ಎಂದು ಕೋರಿದರು.
ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ ಬೆಟ್ಟದಕೊಪ್ಪ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಎಂದು ಸರ್ಕಾರ ಸುಳ್ಳು ವಾದ ಮುಂದೂಡಿತ್ತಿದೆ. 37 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಸರ್ಕಾರದ ವ್ಯವಸ್ಥಿತ ನಿರ್ಲಕ್ಷ್ಯದಿಂದ 21,000 ಸರ್ಕಾರಿ ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಂಡಿಲ್ಲ. 60,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಈ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಹಳ್ಳಿ ಶಾಲೆಗಳನ್ನು ಮುಚ್ಚಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆಗಳನ್ನು ಸರ್ಕಾರ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯೆ ತುಳಜಾ ರಾಮ ಎನ್.ಕೆ., ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಿಳೂರ, ಬಾಳಗಮಟ್ಟಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ಕಲ್ಲಪ್ಪ ಪಾಟೀಲ,ಹಿಂದುಳ್ಳಿ ಗ್ರಾಪಂ ಅಧ್ಯಕ್ಷ ಸತೀಶ ಶಹಾಪುರಕರ, ನಾಮದೇವ ತಳವಾರ ದಶರಥ ಧಾಮಣೆಕರ, ಆನಂದ್ ದೇಸಾಯಿ, ಭರಮಪ್ಪ ಕಾಲೇರಿ, ಮಾಳಿಂಗರಾಯ ಶಹಾಪುರಕರ, ಮಹಾದೇವಿ ತಳವಾರ, ರವಿ ಲೋಹಾರ ಇತರರಿದ್ದರು.
ಬಾಳಗಮಟ್ಟಿ, ಕುಟ್ಟಲವಾಡ, ಹೊನ್ನಿಹಾಳ, ಶಿಂದೊಳ್ಳಿ, ಬಸರಿಕಟ್ಟಿ, ಶಗನಮಟ್ಟಿ, ತಾರಿಹಾಳ ಸೇರಿದಂತೆ ವಿವಿಧ ಗ್ರಾಮಗಳ ಶಾಲಾ ಪ್ರಮುಖರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.