ಮನೋಜ ಚವ್ಹಾಣ 
ಬೆಳಗಾವಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ

ಡಿ.ವಿ. ಕಮ್ಮಾರ
ಬೆಳಗಾವಿ
ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ಕಾರ್ಯಕರ್ತರ ಮೂಲಕ ಆಯ್ಕೆ ಮಾಡುವ ಸಂಘಟನಾ ಸೃಜನಾ ಅಭಿಯಾನ ಇಂದಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಆ.5ರವರೆಗೆ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಗ್ರಾಮೀಣ ಹಾಗೂ ನಗರ ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಆಯಾ ವಿಧಾನಸಭೆ ವ್ಯಾಪ್ತಿಯಲ್ಲೇ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ, ಅಭಿಯಾನದ ಜಿಲ್ಲಾ ಉಸ್ತುವಾರಿ ಮನೋಜ ಚವ್ಹಾಣ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ದೇಶದ 1054 ಜಿಲ್ಲೆಗಳ ಪೈಕಿ 762 ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ಪ್ರಕ್ರಿಯೆ ನಡೆದಿರಲಿಲ್ಲ. ಶುಕ್ರವಾರ ಕರ್ನಾಟಕದ ಅಭಿಯಾನಕ್ಕೆ ಚಾಲನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ನಮ್ಮ ತಂಡ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದೆ ಎಂದು ಹೇಳಿದರು.
ಸ್ಥಳೀಯ ಕಾರ್ಯಕರ್ತರು, ಸಂಘಟನೆಗಳು, ಗಣ್ಯರ ಜತೆ ಚರ್ಚಿಸುತ್ತೇವೆ. ಅವರು ಸ್ಥಳೀಯ ನಾಯಕತ್ವ ಆಯ್ಕೆಗೆ ಶಿಫಾರಸು ಮಾಡಲಿದ್ದಾರೆ. ನಂತರ ಪಿಸಿಸಿ ಮುಖಂಡರು, ಸಿಡಬ್ಲ್ಯುಸಿ ಸದಸ್ಯರು, ಸಿಎಂ, ಉಸ್ತುವಾರಿ ಕಾರ್ಯದರ್ಶಿಗಳ ಜತೆ ಚರ್ಚೆ ಮಾಡಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುವುದು. ಮುಂಬರುವ ಗ್ರಾಪಂ, ಜಿಪಂ, ತಾಪಂ ಸೇರಿ ವಿವಿಧ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಪೂರಕವಾಗಬಲ್ಲ ಹಾಗೂ ಕಾರ್ಯಕರ್ತರ ಮನದಾಳ ಅರಿತವರನ್ನು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಜು.26ರಿಂದ ಆ.4ರವರೆಗೆ ಕ್ರಮವಾಗಿ ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಖಾನಾಪುರ, ಅರಭಾವಿ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ-ಯಲ್ಲಮ್ಮ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ದಿನ ಬೆಳಗ್ಗೆ 11ರಿಂದ ಕಾರ್ಯಕರ್ತರಿಗೆ ನಾವು ಲಭ್ಯ ಇರಲಿದ್ದೇವೆ. ಒಬ್ಬೊಬ್ಬರೇ ಬಂದು ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಕೊನೆಯದಾಗಿ ಆ.5ರಂದು ಜಿಲ್ಲಾ ಕಚೇರಿಯಲ್ಲಿ ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಕರೆಯಿಸಿ ಸಭೆ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ, ಆಕಾಂಕ್ಷಿಗಳ ಸಮರ್ಥತೆಯನ್ನು ಅವಲೋಕಿಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಿದ್ದೇವೆ. ಅದನ್ನು ಆಧರಿಸಿ ಕೊನೆಯ ಆಯ್ಕೆ ಮಾಡಲಿದ್ದಾರೆ ಎಂದು ವಿವರಿಸಿದರು.
ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್, ವಿನಯ ನಾವಲಗಟ್ಟಿ, ಮೃಣಾಲ್ ಹೆಬ್ಬಾಳ್ಕರ್, ಸದಾನಂದ ಡಂಗನವರ, ಮೋಹನ ಅಸುಂಡಿ, ಸುಧಾಕರ ಬಡಿಗೇರ, ರಾಹುಲ ಜಾರಕಿಹೊಳಿ ಇತರರಿದ್ದರು.