ಯಲ್ಲಮ್ಮನ ಗುಡ್ಡದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು ಉಚಿತವಾಗಿ ವಿತರಿಸುವಂತೆ ಆಗ್ರಹಿಸಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ವತಿಯಿಂದ ಸವದತ್ತಿ ನಗರದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರಗೆ ಮನವಿ ಸಲ್ಲಿಸಲಾಯಿತು. ನಾಗಪ್ಪ ಬಡೆಪ್ಪನವರ, ಮಲ್ಲಪ್ಪ ಮಾದರ ಇತರರಿದ್ದರು. 
ಬೆಳಗಾವಿ

ಮಾಜಿ ದೇವದಾಸಿಯರಿಗೆ ಮಳಿಗೆ ವಿತರಿಸಿ

ಅರ್ಚನಾ ಜಾಧವ
ಸವದತ್ತಿ: ಮಾಜಿ ದೇವದಾಸಿಯರಿಗೆ ಸ್ವಉದ್ಯೋಗ ಕಲ್ಪಿಸುವ ಉದ್ದೇಶದಿಂದ ಯಲ್ಲಮ್ಮನ ಗುಡ್ಡದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು ಉಚಿತವಾಗಿ ವಿತರಿಸುವಂತೆ ಆಗ್ರಹಿಸಿ ಮಾಸ್ ವತಿಯಿಂದ ನಗರದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು ಮಾಜಿ ದೇವದಾಸಿಯರಿಗೆ ವಿತರಿಸಬೇಕು. ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಮಹಿಳೆಯರನ್ನು ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಿ ಮಳಿಗೆ ಹಂಚಿಕೆ ಮಾಡಬೇಕು. ಇದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದರು.
1997ರಲ್ಲಿ ಕರ್ನಾಟಕ ಸೊಸೈಟಿ ಕಾಯ್ದೆಯಡಿ ಸಂಸ್ಥೆ ನೋಂದಣಿಯಾಗಿದ್ದು, ಜಿಲ್ಲೆಯ ಮಾಜಿ ದೇವದಾಸಿಯರ ಪುನರ್ವಸತಿ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ 3,723 ಮಾಜಿ ದೇವದಾಸಿಯರು ಸದಸ್ಯತ್ವ ಹೊಂದಿದ್ದಾರೆ. 5,100ಕ್ಕೂ ಹೆಚ್ಚು ಮಹಿಳೆಯರು ವಿವಿಧ ಆದಾಯ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜತೆಗೆ 180 ಸ್ವಸಹಾಯ ಸಂಘ ರಚಿಸಿಕೊಂಡು ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಾಗಪ್ಪ ಬಡೆಪ್ಪನ್ನವರ, ಮಲ್ಲಪ್ಪ ಮಾದರ, ಶಿವಾನಂದ ಬೇವಿನಗಿಡದ, ಎಂ.ಮಲ್ಲಪ್ಪ, ಅರುಣ ಹಲಕಿ, ಮಲವ್ವ ಬೇವಿನಗಿಡದ, ಯಲ್ಲವ್ವ ಬಡೆಪ್ಪನ್ನವರ, ಕೀರವ್ವ ಮಲ್ಲಾಡ, ರವಿ ಮಾದರ, ಯಲ್ಲವ್ವ ಕಾಳಿ, ಅನಸೂಯಾ ಮಾದರ, ಕರೆವ್ವ ಗೋವನಕೊಪ್ಪ ಇತರರಿದ್ದರು.