ಬೆಳಗಾವಿ ಸೇಂಟ ಅಂಥೋನಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭವನ್ನು ಪಿ.ಜಿ.ಆರ್.ಸಿಂಧ್ಯಾ, ರಾಹುಲ ಶಿಂಧೆ ಉದ್ಘಾಟಿಸಿದರು. ಅಂಬಿಕಾ ಬ್ರಹ್ಮಕುಮಾರಿ, ಎಸ್.ಬಿ.ಕೊಂಗವಾಡ, ಗಜಾನನ ಮನ್ನಿಕೇರಿ ಇತರರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ನಾಯಕತ್ವ ಗುಣವನ್ನು ಬೆಳೆಸುವ ವೇದಿಕೆಯಾಗಿದ್ದು, ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.
ನಗರದ ಸೇಂಟ ಅಂಥೋನಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸೇರ್ಪಡೆಯಿಂದ ವ್ಯಕ್ತಿತ್ವ ವಿಕಸನದ ಜತೆಗೆ ಶಿಸ್ತುಬದ್ಧ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಲ್ಲ ಕಾರ್ಯಕ್ರಮಗಳಿಗೆ ಜಿಪಂ ಅಗತ್ಯ ಸಹಕಾರ ನೀಡಲಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ದೇಶಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 2 ಕೋಟಿ ವಿದ್ಯಾರ್ಥಿಗಳು ಇದ್ದು, ರಾಜ್ಯದಲ್ಲಿ 8 ಲಕ್ಷ ಮಕ್ಕಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 64 ಸಾವಿರ ಮಕ್ಕಳು ಸ್ಕೌಟ್ಸ ಮತ್ತು ಗೈಡ್ಸ್‌ನಲ್ಲಿದ್ದು, ಮುಂಬರುವ ದಿನಗಳಲ್ಲಿ ಒಂದು ಲಕ್ಷದವರೆಗೆ ವಿದ್ಯಾರ್ಥಿಗಳು ಸೇರ್ಪಡೆಯಾಗುವ ವಿಶ್ವಾಸವಿದೆ ಎಂದರು.
ಮಾನವ ಸಂಪನ್ಮೂಲಗಳ ಗುಣಗಳ ಮೇಲೆ ದೇಶದ ಅಭಿವೃದ್ಧಿಯನ್ನು ಅಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಗೆ ಸಹಕಾರಿಯಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಬೆಳೆಸಲಾಗುತ್ತಿದೆ ಎಂದು ಹೇಳಿದರು.
ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬೆಳಗಾವಿ ವಿಭಾಗದ ಮುಖ್ಯಸ್ಥೆ ಅಂಬಿಕಾ ಬ್ರಹ್ಮಕುಮಾರಿ ಮಾತನಾಡಿ, ನಶಾ ಮುಕ್ತಿ ಅಭಿಯಾನದ ಮಹತ್ವವನ್ನು ತಿಳಿಸಿದರು. ಬಳಿಕ ನಶಾ ಮುಕ್ತಿ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ, ಕಬ್ಸ್ ಮತ್ತು ಬುಲ್-ಬುಲ್ ವಿದ್ಯಾರ್ಥಿಗಳಿಗೆ ಚತುರ್ಥ ಚರಣ ಹಾಗೂ ಹಿರಕ ಪಂಕ್ ಪ್ರಶಸ್ತಿ ಪತ್ರ, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಒಟ್ಟು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ಬಿ. ಕೊಂಗವಾಡ, ಪಿಎಂ ಪೋಷಣ್ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ, ಗೈಡ್ಸ್ ಆಯುಕ್ತೆ ಪ್ರಭಾವತಿ ಪಾಟೀಲ ಇತರರಿದ್ದರು.