ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಪುರಾಣಿಕ ಮಾತನಾಡಿದರು.  
ಬೆಳಗಾವಿ

ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ

ಡಿ.ವಿ. ಕಮ್ಮಾರ
ಬೆಳಗಾವಿ: ಪರಂಪರಾ ಮಹಿಳಾ ವೇದಿಕೆಯಿಂದ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಫೆ.28ರಂದು ಬೆಳಗ್ಗೆ 10ಕ್ಕೆ ಮಹಿಳೆಯರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಕುರಿತು ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಪ್ರಿಯಾ ಪುರಾಣಿಕ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ನಿರ್ವಹಣೆ ಕುರಿತ ವಿವಿಧ ವಿಷಯಗಳನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಗುವುದು. ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಉತ್ಪನ್ನ ಹೇಗೆ ಪ್ರದರ್ಶಿಸುವುದು ಎಂದು ತರಬೇತಿ ನೀಡಲಾಗುವುದು ಎಂದರು.
ಆಹಾರ ಪದಾರ್ಥಗಳಿಂದ ಹಿಡಿದು, ಗ್ರಾಹಕರಿಗೆ ಬೇಕಾಗುವ ವಿವಿಧ ಉತ್ಪನ್ನ ತಯಾರಿಸಿ ಅನೇಕ ಮಹಿಳೆಯರು ಮಾರುತ್ತಿದ್ದಾರೆ. ಆದರೆ ಕೆಲವರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಗೊತ್ತಿಲ್ಲ. ಕೆಲವರು ಏಜೆಂಟರ ಮೂಲಕ ತಮ್ಮ ಉತ್ಪನ್ನ ಮಾರುತ್ತಾರೆ. ಈಗ ಏಜೆಂಟರಿಂದ ತಪ್ಪಿಸಿಕೊಂಡು ತಮ್ಮ ಉತ್ಪನ್ನಗಳನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾರಲು ಇರುವ ಅವಕಾಶಗಳ ಬಗ್ಗೆ ಕಲಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಮಹಿಳಾ ಉದ್ಯಮಗಳ ಸಂಘ ಕಾರ್ಯಾರ್ಗಾರಕ್ಕೆ ಸಹಯೋಗ ನೀಡಿದೆ ಎಂದು ವಿವರಿಸಿದರು.
ಲತಾ ಹೂಲಿ, ಭಾರತಿ ವಡವಿ, ಶೌರಿಕಾ ಗರಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.